Kudalasamgama: ಮೀಸಲಾತಿಗೆ ಹೋರಾಡುತ್ತಿದ್ದ ಕೂಡಲಸಂಗಮ ಪಂಚಮಸಾಲಿ ಮಠಕ್ಕೆ ರಾತ್ರೋರಾತ್ರಿ ಬೀಗ – ಭಕ್ತರಲ್ಲಿ ಸಂಚಲನ!!

Share the Article

Kudalasamgama: ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಭಾನುವಾರ ರಾತ್ರೋ ರಾತ್ರಿ ಬೀಗ ಹಾಕಲಾಗಿದ್ದು, ಭಕ್ತರಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮಠದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದರಿಂದ ರಕ್ಷಣೆಯ ದೃಷ್ಟಿಯಿಂದ ಇದಕ್ಕೆ ಬೀಗ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಹೌದು, ಕೂಡಲಸಂಗಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ಗೆ ಸೇರಿದ ಪಂಚಮಸಾಲಿ ಪೀಠ ಬಸವ ಜಯಮೃತ್ಯುಂಜಯ ಸ್ವಾಮಿ ಇರುವ ಪೀಠದ ಕಟ್ಟಡದ ಗೇಟಿಗೆ ಭಾನುವಾರ ರಾತ್ರಿ ಬೀಗ ಹಾಕಲಾಗಿದೆ. ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಠದ ದ್ವಾರಗಳಿಗೆ ಯಾರು ಬೀಗ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ತಿಂಗಳಿನಿಂದ ವ್ಯವಸ್ಥಾಪಕರಾಗಿದ್ದವರು ಬೀಗ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ವಿವಾದಕ್ಕೆ ಕಾರಣವೇನು?

ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ತೊಡೆತಟ್ಟಿ ನಿಂತಿದ್ದ ಕಾಂಗ್ರೆಸ್ ಪಂಚಮಸಾಲಿ ನಾಯಕರು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ವಿಜಯಾನಂದ ಕಾಶಪ್ಪನರ್‌, ಹೆಬ್ಬಾಳ್ಕರ್‌, ಬಿಜೆಪಿ ನಾಯಕರಾದ ಯತ್ನಾಳ್‌ ಮುಂಚೂಣಿ ಹೋರಾಟ ನಡೆಸಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆ ಪಕ್ಷದ ನಾಯಕರು ಹೋರಾಟದಿಂದ ಪಲಾಯನ ಮಾಡಿದ್ದರು. ಆದರೆ, ಅಂದು ಬಿಜೆಪಿಯಲ್ಲಿದ್ದ ಪಂಚಮಸಾಲಿ ನಾಯಕ ಯತ್ನಾಳ್ ಹಾಗೂ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ಒಗ್ಗಟ್ಟಿನ ಮಂತ್ರ ಸಾರಿದ್ದರು. ಇದು ವಿಜಯಾನಂದ ಕಾಶಪ್ಪನವರ ಹಾಗೂ ಪಂಚಮಸಾಲಿ ಶ್ರೀ ಮಧ್ಯೆ ಬಿರುಕು ಮೂಡಲು ಕಾರಣವಾಗಿತ್ತು. ಕೆಲ ತಿಂಗಳ ಹಿಂದೆ ಪಂಚಮಸಾಲಿ ಪೀಠಾಧಿಪತಿ ಸ್ಥಾನದಿಂದ ಸ್ವಾಮೀಜಿ ಕೆಳಗಿಳಿಸುವ ವಿಚಾರ ಕೂಡ ಚರ್ಚೆಗೆ ಬಂದಿತ್ತು. ಈಗ ಪಂಚಮಸಾಲಿ ಪೀಠಕ್ಕೆ ಕಾಶಪ್ಪನವರ ಬೆಂಬಲಿಗರು ರಾತ್ರೋರಾತ್ರಿ ಬೀಗ ಹಾಕಿದ್ದಾರೆ. ಇದು ಪಂಚಮಸಾಲಿ ಸಮುದಾಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ಜಯಮೃತ್ಯಂಜಯ ಶ್ರೀಗಳು ಹೇಳಿದ್ದೇನು?

ಘಟನೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಯಮೃತ್ಯಂಜಯ ಶ್ರೀಗಳು, ನಾನು ಸಮಾಜ ಸಂಘಟನೆ ಹಾಗೂ ಮೀಸಲಾತಿ ಹೋರಾಟಕ್ಕೆ ಸಮಾಜದ ಜನರನ್ನು ಸಿದ್ದತೆಗೊಳಿಸಲು ಜಿಲ್ಲೆ ಜಿಲ್ಲೆ ಪ್ರವಾಸ ಕೈಗೊಂಡಿದ್ದೇನೆ. ಈ ಹಿನ್ನೆಲೆ ಪೀಠದ ಕಡೆಗೆ ಹೋಗಲು ಆಗಿಲ್ಲ. ನಾನು ಹೊರಗಡೆ ಇದ್ದಾಗ ಅಲ್ಲಿ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ಯಾರು ಬೀಗ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಕೂಡಲಸಂಗಮದ ಪೀಠಕ್ಕೆ ಹೋದ ಮೇಲೆಯೇ ನೈಜ ಸ್ಥಿತಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

 ಶಾಸಕ ಕಾಶಪ್ಪನವರು ಹೇಳಿದ್ದೇನು?

‘ಮಠದಲ್ಲಿ ಅಹಿತಕರ ಚಟುವಟಿಕೆಗಳು ನಡೆಯದಿರಲಿ ಎಂಬ ಉದ್ದೇಶದಿಂದ ಗೇಟ್ ಮಾಡಿಸಿ, ಬೀಗ ಹಾಕಲಾಗಿದೆ. ಮಠದ ಟ್ರಸ್ಟ್ ಅಧ್ಯಕ್ಷನಾಗಿರುವ ಕಾರಣ ಮಠದ ಸುರಕ್ಷತೆ ನನ್ನ ಜವಾಬ್ದಾರಿ. ಸ್ವಾಮೀಜಿಗೆ ಹೇಳಿ ಮಾಡುವಂತದ್ದಲ್ಲ. ಭದ್ರತೆ ದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

Comments are closed.