UPI: ಬೇಕರಿ, ಬೀಡ ಅಂಗಡಿ ಮಾಲೀಕರಿಗೆ ವಾಣಿಜ್ಯ ಇಲಾಖೆಯಿಂದ ಸೂಚನೆ!

Share the Article

UPI: ಯುಪಿಐ (UPI) ಮೂಲಕ 40 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ನಡೆಸಿದ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳು ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕೆಂಬ ನೋಟಿಸ್​ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ವಾರ್ಷಿಕ ವಹಿವಾಟು 1.5 ಕೋಟಿಗಿಂತ ಕಡಿಮೆ ಇದ್ದರೇ ಅಂತಹ ವರ್ತಕರು ಕೇವಲ ಶೇ 1 ರಷ್ಟು ಮಾತ್ರ ತೆರಿಗೆ ಪಾವತಿಸಬಹುದಾಗಿದೆ ಎಂದು ಹೇಳಿದೆ.

ಆದರೆ, ಯುಪಿಐ ಮೂಲಕ 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿದೆ. ಈ ಮಾಹಿತಿಯನ್ನು ಪರಿಶೀಲಿಸಿದ ಇಲಾಖೆ 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ – 2017ರಡಿಯಲ್ಲಿ ನೋಂದಣಿಯನ್ನು ಪಡೆಯದೆ, ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟೀಸ್​ ನೀಡಿದೆ. ಈ ನೋಟಿಸುಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕು ಎಂದು ಇಲಾಖೆ ತಿಳಿಸಿದೆ.

ಜುಲೈ 1, 2017 ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ದೇಶಾದ್ಯಂತ ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯ ಕಲಂ 22 ರನ್ವಯ ಸರಕು ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂಪಾಯಿಗಳನ್ನು ಮೀರಿದರೆ ಅಥವಾ ಸೇವೆಗಳ ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ಮೀರಿದರೆ ಜಿಎಸ್​ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ.

Comments are closed.