Health Tips: ತೆಂಗಿನ ಆರೋಗ್ಯ ಪ್ರಯೋಜನಗಳು ಏನು? ಹೇಗೆ ಉಪಯೋಗಿಸಿದರೆ ಉತ್ತಮ?

Health Tips: ಈ ತೆಂಗಿನಕಾಯಿಯಲ್ಲಿ ಪ್ರೋಟೀನ್‌ಗಳು ವಿಟಮಿನ್‌ಗಳು, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಸೆಲೆನಿಯಮ್, ತಾಮ್ರ, ರಂಜಕ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ನಾರಿನಂಶ, ಇತ್ಯಾದಿಗಳು ಸಮೃದ್ಧವಾಗಿವೆ. ಹೆಚ್ಚುವರಿಯಾಗಿ, ಒಣಗಿದ ತೆಂಗಿನಕಾಯಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಅಡುಗೆಯಲ್ಲಿ ಕೊಬ್ಬರಿಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ತೆಂಗಿನಕಾಯಿಯನ್ನು ಮುಖ್ಯವಾಗಿ ಕೊಂಕಣದಲ್ಲಿ ಬೆಳೆಯಲಾಗುತ್ತದೆ. ಆದರೆ ಇತರ ಭಾಗಗಳನಲ್ಲೂ ಕೂಡ ತೆಂಗಿನ ತೋಟಗಳು ಸಾಕಷ್ಟು ಕಂಡುಬರುತ್ತವೆ. ಅಲ್ಲದೆ, ಅನೇಕ ಜನರು ತಮ್ಮ ಅಂಗಳದಲ್ಲಿ, ಹಿತ್ತಲಲ್ಲಿ ಅಥವಾ ಬದುವುಗಳಲ್ಲಿ ತೆಂಗಿನ ಮರಗಳನ್ನು ಬೆಳೆಯುತ್ತಾರೆ. ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ತೆಂಗಿನ ಮರಕ್ಕೆ ಈ ಹೆಸರು ಸರಿಯಾಗಿ ಅನ್ವಯವಾಗುತ್ತದೆ. ಏಕೆಂದರೆ, ತೆಂಗಿನ ಮರದ ಯಾವುದೇ ಭಾಗವು ವ್ಯರ್ಥ ಅಥವಾ ತ್ಯಾಜ್ಯವಾಗಿರುವುದಿಲ್ಲ. ಇದೊಂದು ಪರಿಸರ ಸ್ನೇಹಿ ಹಾಗೂ ಬಹುಪಯೋಗಿ ಮರವಾಗಿದೆ.
ಮುಖ ಸೌಂದರ್ಯ:
ತೆಂಗಿನ ನೀರು ದೇಹಕ್ಕಷ್ಟೆ ಅಲ್ಲದೆ ಮುಖ ಸೌಂದರ್ಯಕ್ಕೂ ತುಂಬಾ ಪೌಷ್ಟಿಕವಾಗಿದೆ. ಹಸಿ ಕೊಬ್ಬರಿಯು ನಮ್ಮ ಮುಖಕ್ಕೆ ಬಹಳ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತದೆ. ಮಂದ ಮತ್ತು ಒಣ ಚರ್ಮ ಹೊಂದಿರುವವರಿಗೆ ಕೊಬ್ಬರಿಯ ಹಾಲಿನಿಂದ ಮುಖಕ್ಕೆ ಮಸಾಜ್ ಮಾಡಿದರೆ ತುಂಬಾ ಮುಖದ ತಾಜಾತನ ಮತ್ತು ಕಾಂತಿ ವೃದ್ಧಿಯಾಗುತ್ತದೆ.
ಬೊಜ್ಜು/ತೂಕ ನಷ್ಟ:
ತೂಕ ನಷ್ಟಕ್ಕೆ ತೆಂಗಿನಕಾಯಿ ತುಂಬಾ ಉಪಯುಕ್ತವಾಗಿದೆ. ಕೊಬ್ಬರಿಯು ಹಸಿವು ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಕೊಬ್ಬರಿಯಲ್ಲಿನ ನಾರಿನಂಶವೂ ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಬೊಜ್ಜು ಕರಗಿಸಲು ಸಹಾಯಕವಾಗಿದೆ
ಮಿದುಳಿನ ಆರೋಗ್ಯ:
ಕೊಬ್ಬರಿಯಲ್ಲಿನ ಪೋಷಕಾಂಶಗಳು ಮತ್ತು ಕೊಬ್ಬಿನ ಅಂಶ ನೆನಪಿನ ಶಕ್ತಿಯನ್ನು ಹೆಚ್ಚುತ್ತದೆ. ಹಸಿ ಕೊಬ್ಬರಿಯೊಂದಿಗೆ ಬೆಲ್ಲ ಮತ್ತು ಬಾದಾಮಿ ಸೇವಿಸುವುದು ಕೂಡ ತುಂಬಾ ಪ್ರಯೋಜನಕಾರಿ. ಇದು ವಯಸ್ಕರಲ್ಲಿ ಅಲ್ಜೈಮರ್ ನಂತಹ ಭಯಂಕರ ಕಾಯಿಲೆಯನ್ನು ತಡೆಯಲು ಮತ್ತು ತಪ್ಪಿಸಲು ಸಹಾಯಕವಾಗುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆ:
ಒಣ ಕೊಬ್ಬರಿಯ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದರಲ್ಲಿರುವ ವಿಪುಲವಾದ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕ ಘಟಕಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯಕವಾಗಿವೆ. ಆದರೆ, ಒಣ ಕೊಬ್ಬರಿಯನ್ನು ಮಿತವಾಗಿ ಸೇವಿಸಬೇಕು. ಅಧಿಕ ಪ್ರಮಾಣದಲ್ಲಿ ಇದು ಗಂಟಲು ಹಾಗೂ ಜೀರ್ಣದ ಸಮಸ್ಯೆಗಳನ್ನು ಉಂಟುಮಾಡಬಹುದು
ಮಲಬದ್ಧತೆ ಮತ್ತು ಜೀರ್ಣಕ್ರಿಯೆ:
ಹಸಿ ಕೊಬ್ಬರಿಯಲ್ಲಿನ ಹೇರಳವಾದ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಅಲ್ಲದೇ ಮಲಬದ್ಧತೆಯನ್ನು ನಿವಾರಿಸಲು ಸಹಾಯಕವಾಗಿದೆ.
ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್:
ಕೊಬ್ಬರಿಯಲ್ಲಿ ಅಗತ್ಯದ ಪೋಷಕಾಂಶಗಳಾದ ನಾರಿನಂಶ, ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಜೀವನ ಶೈಲಿಗೆ ಸಂಬಂಧಪಟ್ಟ ಕಾಯಿಲೆಗಳಾದ ಮಧುಮೇಹ ರಕ್ತದ ಅಧಿಕ ಒತ್ತಡ ಮತ್ತು ಕೊಲೆಸ್ಟ್ರಾಲ್ ಇವುಗಳನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಸಹಾಯಕವಾಗಿವೆ.
ಕ್ಯಾನ್ಸರ್:
ತೆಂಗಿನ ನೀರು ಮತ್ತು ಕೊಬ್ಬರಿ ಎರಡೂ ಕ್ಯಾನ್ಸರನ್ನು ತಡೆಗಟ್ಟಲು ಬಹಳ ಉಪಯುಕ್ತವಾಗಿವೆ. ನಿಯಮಿತವಾಗಿ ತೆಂಗಿನ ನೀರಿನ ಸೇವನೆ, ತೆಂಗಿನ ಎಣ್ಣೆಯ ಬಳಕೆ ಮತ್ತು ಕೊಬ್ಬರಿ ಸೇವನೆಯಿಂದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು ಮತ್ತೆ ಅದರ ಬೆಳವಣಿಗೆಯನ್ನು ಸಹ ಕುಂದಿಸಬಹುದು.
ಕೂದಲಿನ ಆರೋಗ್ಯ:
ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆಯಿಂದ ಕೂದಲಿಗೆ ಆಗುವ ಲಾಭಗಳ ಬಗ್ಗೆ ತಿಳಿಯದವರು ಯಾರು ಇಲ್ಲ. ಕೂದಲಿನ ಆರೋಗ್ಯಕ್ಕೆ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆ ಅಮೃತ ಸಮಾನವಾಗಿದೆ. ಕೂದಲು ಉದುರುವಿಕೆ ಬೋಳುತನ ತಡೆಯಲು ಕೊಬ್ಬರಿ ಮತ್ತು ಕೊಬ್ಬರಿ ಎಣ್ಣೆ ಪ್ರಯೋಜನಕಾರಿಯಾಗಿದೆ. ಅಲ್ಲದೆ ಕೂದಲಿನ ಕಾಂತಿಯನ್ನು ಇದು ಹೆಚ್ಚಿಸುತ್ತದೆ. ತಲೆ ಹೊಟ್ಟು ನಿವಾರಣೆಗೂ ಸಹಾಯಕವಾಗಿದೆ. ಕೂದಲಿಗೆ ಹಚ್ಚಲು ತೆಂಗಿನ ನೀರು ಕೂಡ ಉಪಯುಕ್ತವಾಗಿದೆ. ಇದರಿಂದ, ಕೂದಲು ಮೃದುವಾಗುತ್ತವೆ ಕೂದಲಿಗೆ ಹೊಳಪು ಬರುತ್ತದೆ.
ಗಂಡೂಷಾ (ಆಯಿಲ್ ಪುಲ್ಲಿಂಗ್):
ಎರಡು ಚಮಚ ತೆಂಗಿನ ಎಣ್ಣೆಯಲ್ಲಿ ಮೂರು ನಾಲ್ಕು ಹನಿ ಲವಂಗದ ಎಣ್ಣೆಯನ್ನು ಬೆರೆಸಿ ಅದರಿಂದ ಬಾಯಿ ಮುಕ್ಕಳಿಸಿದರೆ ಹಲ್ಲಿನ ಸೋಂಕುಗಳು, ದಂತ ಕುಳಿಗಳು, ಇತ್ಯಾದಿ ಸಮಸ್ಯೆಯಲ್ಲಿ ಲಾಭವಾಗುತ್ತದೆ.
ಕಿವಿ ಮಂತ್ರಗಳು:
ವಾರದಲ್ಲಿ ಮೂರ್ನಾಲ್ಕು ಬಾರಿಯಾದರೂ ತೆಂಗಿನ ನೀರನ್ನು ಸೇವಿಸಿ.
ಅನೇಕ ಅಂಗಡಿಗಳಲ್ಲಿ, ಮಾರುಕಟ್ಟೆಯಲ್ಲಿ ಹಾಗೂ ದೇವಸ್ಥಾನಗಳಲ್ಲಿ ತೆಂಗನ್ನು ಒಡೆದ ನಂತರ ನೀರನ್ನು ವ್ಯರ್ಥ ಹರಿಯ ಬಿಡುತ್ತಾರೆ. ಇದೊಂದು ಮೂರ್ಖತನದ ಲಕ್ಷಣ. ಏಕೆಂದರೆ, ಇದು ಅಮೃತವನ್ನು ಪೋಲು ಮಾಡಿದಂತೆಯೇ ಸರಿ! ಇಂಥ ಕಡೆಗಳಲ್ಲಿ ವಿಶೇಷವಾಗಿ, ದೇವಸ್ಥಾನಗಳಲ್ಲಿ ತೆಂಗಿನ ನೀರನ್ನು ಕೇಳಿ ಪಡೆದು ಸಾಧ್ಯವಿದ್ದಷ್ಟು ತೆಂಗಿನ ನೀರನ್ನು ಸೇವಿಸಿ. ಇದಕ್ಕಿಂತ ಉತ್ತಮ ತೀರ್ಥ ಬೇರೊಂದಿಲ್ಲ!
ಒಬ್ಬ ಸಾಮಾನ್ಯ ವ್ಯಕ್ತಿ ವಾರಕ್ಕೆ ಕನಿಷ್ಠ ಎರಡು ತೆಂಗಿನಕಾಯಿಗಳ ಕೊಬ್ಬರಿಯನ್ನು ಬಳಸಬೇಕು.
ಕೊಬ್ಬರಿಯನ್ನು ಅಡುಗೆಯಲ್ಲಿ ಬಳಸುವುದಕ್ಕಿಂತ ಹಾಗೆಯೇ ಅಗಿದು ತಿನ್ನುವುದು ಉತ್ತಮ. ಇದರಿಂದ ಅನೇಕ ಲಾಭಗಳು ಇವೆ. ಅಗಿಯುವುದರಿಂದ ಹಲ್ಲು, ವಸಡುಗಳು ಮತ್ತು ದವಡೆಯ ಸ್ನಾಯುಗಳ ಬಲವರ್ಧನೆಯಾಗುತ್ತದೆ.
ಈ ರೀತಿ ನುರಿಸಿ ಕೊಬ್ಬರಿಯನ್ನು ತಿನ್ನುವುದರಿಂದ ಅದರ ಸಂಪೂರ್ಣ ಲಾಭಗಳು ದೊರೆಯುತ್ತವೆ.
ಮಕ್ಕಳಿಗೆ ಕೇಕ್, ಚಾಕ್ಲೇಟು, ಐಸ್ ಕ್ರೀಮ್, ಕರುಕು ತಿಂಡಿಗಳನ್ನು ಕೊಡುವುದಕ್ಕಿಂತ ಕೊಬ್ಬರಿ ತಿನ್ನುವ ಅಭ್ಯಾಸವನ್ನು ಬೆಳೆಸಿ. ಇದು ಜೀವನದುದ್ದಕ್ಕೂ ಅವರ ಆರೋಗ್ಯವನ್ನು ಕಾಪಾಡಲು ಸಹಾಯಕವಾಗುತ್ತದೆ.
ವಯಸ್ಕರು ಸಹ ತುರಿದ ಕೊಬ್ಬರಿಯೊಂದಿಗೆ ಎಳ್ಳು, ಬಾದಾಮಿ ಪುಡಿ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ಸೇವಿಸುವುದು ಉತ್ತಮ.
ಆಗಾಗ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಶುದ್ಧ ಕೊಬ್ಬರಿ ಎಣ್ಣೆಯನ್ನು ಸೇವಿಸುವುದು ಬಹಳ ಪ್ರಯೋಜನಕಾರಿಯಾಗಿದೆ.
ಕರಿದ ಪದಾರ್ಥಗಳನ್ನು ತಯಾರಿಸಲು ಇತರ ಎಣ್ಣೆಗಳಿಗಿಂತ ಕೊಬ್ಬರಿ ಎಣ್ಣೆ ಉತ್ತಮ ಪರ್ಯಾಯವಾಗಿದೆ.
ಸಂಪಾದನೆ – ಡಾ. ಪ್ರ. ಅ. ಕುಲಕರ್ಣಿ
Comments are closed.