Belthangady: ಬೆಳ್ತಂಗಡಿ: ನಕಲಿ ಗೆಸ್ಟ್ ಹೌಸ್ ಹೆಸರಿನಲ್ಲಿ ದೋಖಾ: 97400 ರೂ. ಗುಳುಂ!

Belthangady: ನಕಲಿ ಗೆಸ್ಟ್ ಹೌಸ್ ಹೆಸರಿನಲ್ಲಿ ಆನ್ ಲೈನ್ ಕೀಚಕರು ಹೆಣೆದ ವಂಚನಾ ಜಾಲಕ್ಕೆ ಬಿದ್ದು, ಕೊಡಗು ಜಿಲ್ಲೆಯ ಕೃಷಿಕರೊಬ್ಬರು ಮಗಳ ಶಿಕ್ಷಣಕ್ಕೆಂದು ಕೂಡಿಟ್ಟಿದ್ದ ರೂ. 97400/- ಹಣವನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಪೋರ್ಟಲ್ ನಲ್ಲಿ ಹಾಗೂ ಮಡಿಕೇರಿ ಸೆನ್ ಪೊಲೀಸ್ ಠಾಣೆಯಲ್ಲಿ ಪುಕಾರು ದಾಖಲಾಗಿದೆ.
ಮಡಿಕೇರಿ ತಾಲ್ಲೂಕು ಬೆಟ್ಟಗೇರಿ ಆವಂದೂರು ಗ್ರಾಮದ ಕೃಷಿಕ ಕೆ.ಕೆ. ನಾಗೇಶ್ ಎಂಬುವವರು ದಿನಾಂಕ 16-06-2025 ರಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ (Belthangady) ಎಕ್ಷೆಲ್ ಕಾಲೇಜಿನಲ್ಲಿ ತಮ್ಮ ಮಗಳಿಗೆ ಪ್ರಥಮ ವರ್ಷದ ಪಿ.ಯು.ಸಿ. ಪ್ರವೇಶಾತಿ ಕೊಡಿಸಲು ಕೌನ್ಸಿಲಿಂಗ್ ಗಾಗಿ ತೆರಳಿದ್ದರು. ಅಂದು ರಾತ್ರಿ ಒಂದು ದಿನದ ಮಟ್ಟಿಗೆ ಧರ್ಮಸ್ಥಳದಲ್ಲಿರುವ ಸಹ್ಯಾದ್ರಿ ಗೆಸ್ಟ್ ಹೌಸ್ ಎಂಬ ಹೆಸರಿನ ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಿ ತಂಗಿದ್ದಾರೆ. ಮರುದಿನ ತಾರೀಖು 17-06-2025 ರಂದು ಬೆಳಿಗ್ಗೆ ರೂಮ್ ಖಾಲಿ ಮಾಡಿ ಬೆಳ್ತಂಗಡಿಯಲ್ಲಿರುವ ಎಕ್ಷೆಲ್ ಕಾಲೇಜಿನಲ್ಲಿ ನಿಗದಿಯಾಗಿದ್ದ ಕೌನ್ಸಿಲಿಂಗ್ ಗೆ ಹೋಗಿದ್ದಾರೆ.
ಆದರೆ ಕಾಲೇಜಿನಲ್ಲಿ ಕೌನ್ಸಿಲಿಂಗ್ ಮುಗಿಯುವುದು ತಡವಾಗುವುದನ್ನು ಅರಿತು ರಾತ್ರಿ ಊರಿಗೆ ಮರಳಿ ಪ್ರಯಾಣಿಸುವುದು ಕಷ್ಟವಾಗಲಿದ್ದರಿಂದ ಹಿಂದಿನ ರಾತ್ರಿ ತಂಗಿದ್ದ ಅದೇ ಸಹ್ಯಾದ್ರಿ ಗೆಸ್ಟ್ ಹೌಸ್ ನಲ್ಲಿ ರೂಮ್ ಬುಕ್ ಮಾಡಲು ತೀರ್ಮಾನಿಸಿದ್ದಾರೆ. ಆದರೆ ಇವರ ಬಳಿ ಹಿಂದಿನ ದಿನ ತಂಗಿದ್ದ ಸಹ್ಯಾದ್ರಿ ಗೆಸ್ಟ್ ಹೌಸ್ ನ ಸಂಪರ್ಕ ಸಂಖ್ಯೆ ಇರಲಿಲ್ಲ. ಹೀಗಾಗಿ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಸಹ್ಯಾದ್ರಿ ಗೆಸ್ಟ್ ಹೌಸ್ ನ ಮಾಹಿತಿಗಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಹ್ಯಾದ್ರಿ ಗೆಸ್ಟ್ ಹೌಸ್ ಎಂಬ ಹೆಸರಿನ ನಕಲಿ ಮಾಹಿತಿ ಕಣ್ಣಿಗೆ ಬಿದ್ದಿದೆ. ಇವರು ಅದರಲ್ಲಿದ್ದ ಮೊಬೈಲ್ ಗೆ (8256266622) ಕರೆ ಮಾಡಿದ್ದಾರೆ. ಹಿಂದಿಯಲ್ಲಿ ಮಾತನಾಡಿದ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿಯ ಬಳಿ ರೂಮ್ ಬುಕ್ ಮಾಡಲು ತಿಳಿಸಿದಾಗ ರೂ. 1000 ಗೂಗಲ್ ಪೇ ಮಾಡಲು ಹೇಳಿ ಸ್ಕಾನರ್ (ನಂಬರ್ 7631025720) ಅನ್ನು ಕಳುಹಿಸಿದ್ದಾನೆ.
ಅವನ ಮಾತನ್ನು ನಂಬಿದ ನಾಗೇಶ್ ಅವರ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪುತ್ರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ ರೂ. 1000 ಫೋನ್ ಪೇ ಮಾಡಿದ್ದಾನೆ. ತದನಂತರ ಅದೇ ಅಪರಿಚಿತ ವ್ಯಕ್ತಿ ಕರೆ ಮಾಡಿ ರೂ. 4000 ಫೋನ್ ಪೇ ಮಾಡುವಂತೆ ತಿಳಿಸಿ ಅದನ್ನು ರೂಮಿಗೆ ಬಂದ ನಂತರ ಹಿಂತಿರುಗಿಸುವುದಾಗಿ ಹೇಳಿದ್ದಾನೆ. ಅವನ ಮಾತನ್ನು ನಂಬಿದ ಇವರು ರೂ. 4000 ಪೋನ್ ಪೇ ಮಾಡಿದ್ದಾರೆ.
ಇದಾದ ನಂತರ ನಾಗೇಶ್ ರವರ ಖಾತೆಯಿಂದ ಇವರಿಗೆ ಅರಿವಿಲ್ಲದಂತೆಯೇ ಒಂದರ ನಂತರ ಒಂದರಂತೆ ಹಂತ ಹಂತವಾಗಿ ತಲಾ ರೂ. 20000 ರಂತೆ 4 ಸಲ ಒಟ್ಟು 80000 ರೂ. ಕಡಿತಗೊಂಡಿದೆ.
ನಂತರ ರೂ. 4100 ರೂ.100, ರೂ.8200 ರಂತೆ ಒಟ್ಟು ರೂ. 12400 ವಂಚಕರ ಪಾಲಾಗಿದೆ. ಹೀಗೆ ಒಟ್ಟು ರೂ. 97400 (ಮೊದಲು ಫೋನ್ ಪೇ ಮಾಡಿದ ರೂ. 1000 ಮತ್ತು 4000 ರೂ. ಸೇರಿ) ನಾಗೇಶ್ ರವರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ ಮಾಯವಾಗಿದೆ.
ಒಮ್ಮೆಲೆ ತಮಗೆ ಅರಿವಿಲ್ಲದಂತೆ ಇಷ್ಟೊಂದು ಹಣ ವರ್ಗಾವಣೆಗೊಂಡಿರುವ ಬಗ್ಗೆ ದಿಗ್ರ್ಬಮೆಗೊಂಡ ನಾಗೇಶ್ ರವರಿಗೆ ಫೇಕ್ ಸ್ಕಾನರ್ ಗೆ ಹಣ ಕಳುಹಿಸಿ ಮೋಸ ಹೋಗಿರುವುದು ಮನದಟ್ಟಾಗಿದೆ. ಈ ಕುರಿತು ಕೂಡಲೇ ನಾಗೇಶ್ ರವರು ಸೈಬರ್ ಪೊಲೀಸ್ ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದಾರೆ. ಮಡಿಕೇರಿಗೆ ಹಿಂತಿರುಗಿದ ನಂತರ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹಣ ದೋಚಿದ ಅಪರಿಚಿತ ವ್ಯಕ್ತಿಯನ್ನು ಪತ್ತೆಹಚ್ಚಿ, ಕಳಕೊಂಡ ಹಣವನ್ನು ಕೊಡಿಸಿಕೊಡುವಂತೆ ಕೇಳಿಕೊಂಡಿದ್ದಾರೆ.
Comments are closed.