Belgavi: 30 ವರ್ಷಗಳ ಹಿಂದೆ 500 ರೂ ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಈಗ ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್!!

Belagavi : 30 ವರ್ಷಗಳ ಹಿಂದಿನ ಪ್ರಕರಣ ಒಂದಕ್ಕೆ ಸುಪ್ರೀಂ ಕೋರ್ಟ್ ಇದೀಗ ತೀರ್ಪನ್ನು ನೀಡಿರುವುದು ದೇಶಾದ್ಯಂತ ಸುದ್ದಿಯಾಗುತ್ತಿದೆ. ಅದು ಕೂಡ ಇದು ನಮ್ಮ ಕರ್ನಾಟಕದ ಪ್ರಕರಣ ಎಂಬುದು ಇನ್ನೂ ವಿಶೇಷ. ಹೌದು, ಬೆಳಗಾವಿಯಲ್ಲಿ ಜಮೀನನ್ನು ಅಣ್ಣ- ತಮ್ಮಂದಿರ ಹೆಸರಿಗೆ ಮಾಡಿಕೊಡಲು ₹500 ಲಂಚ ಪಡೆದ ಗ್ರಾಮಲೆಕ್ಕಿಗನಿಗೆ (ವಿಲೇಜ್ ಅಕೌಂಟಂಟ್) ಸುಪ್ರೀಂಕೋರ್ಟ್ 30 ವರ್ಷಗಳ ಬಳಿಕ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಂದಹಾಗೆ ಸುಮಾರು 30 ವರ್ಷಗಳ ಹಿಂದೆ ಕಡೋಲಿ ಗ್ರಾಮದ ಲೆಕ್ಕಾಧಿಕಾರಿ ನಾಗೇಶ ಶಿವಂಗೇಕರ ಕಡೋಲಿ ಗ್ರಾಮದ ಲಕ್ಷ್ಮಣ ಕಟಾಂಬಳೆ ಎಂಬ ಸಹೋದರರ ಜಮೀನು ಪಾಲು ಸಂಬಂಧ ಗೇಣಿ ಮತ್ತು ಪಹಣಿ ಪ್ರತಿಯಲ್ಲಿ ವಾಟ್ಲಿ ಮಾಡಿ ಉತಾರ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿ ಬಿದ್ದಿದ್ದರು. ಬಳಿಕ ಲೋಕಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಲೆಕ್ಕಾಧಿಕಾರಿಗೆ 1 ವರ್ಷ ಕಠಿಣ ಶಿಕ್ಷೆ, 1 ಸಾವಿರ ದಂಡ ವಿಧಿಸಿ ಆದೇಶಿಸಿತ್ತು. ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲೆಕ್ಕಾಧಿಕಾರಿ ಧಾರವಾಡ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ ನ್ಯಾಯಾಲಯವು ಪ್ರಕರಣದಿಂದ ಅಧಿಕಾರಿಯನ್ನು ಬಿಡುಗಡೆಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಲೋಕಾಯುಕ್ತ ಅಧಿಕಾರಿಗಳು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಆಪಾದಿತನ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಆದೇಶದಂತೆ ಬುಧವಾರ ಬಂಧಿಸಲಾಗಿದೆ.
Comments are closed.