Train: ಹೈಕೋರ್ಟಿನ 3 ಜಡ್ಜ್ ಗಳು ಪ್ರಯಾಣಿಸುತ್ತಿದ್ದ ರೈಲಿನ ಹಳಿ ತಪ್ಪಿಸಲು ಸಂಚು – ತಪ್ಪಿದ ಬಾರಿ ದೊಡ್ಡ ಅನಾಹುತ

Share the Article

Train: ಹೈಕೋರ್ಟಿನ ಮೂವರು ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ರೈಲಿನ ಹಳಿ ತಪ್ಪಿಸಲು ಸಂಚೊಂದನ್ನು ರೂಪಿಸಲಾಗಿದ್ದು, ಈ ಶಂಕಿತ ಕೃತ್ಯವನ್ನು ರೈಲು ಚಾಲಕನ ಎಚ್ಚರಿಕೆಯಿಂದ ತಪ್ಪಿಸಲಾಯಿತು ಎಂದು ದಿ ಹಿಂದೂ ವರದಿ ಮಾಡಿದೆ.

ಹೌದು, ಮಂಗಳವಾರ ತಡರಾತ್ರಿ ತಮಿಳುನಾಡಿನ ಸೇಲಂ ಜಿಲ್ಲೆಯ ಮಗುಡಂಚವಾಡಿ ರೈಲು ನಿಲ್ದಾಣದ ಬಳಿ ಯೆರ್ಕಾಡ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22650) ರೈಲಿನಲ್ಲಿ ಹೈಕೋರ್ಟ್ ನ ಮೂವರು ನ್ಯಾಯಾಧೀಶರು ಪ್ರಯಾಣಿಸುತ್ತಿದ್ದರು. ಈರೋಡ್ ಜಂಕ್ಷನ್‌ನಿಂದ ರಾತ್ರಿ 9:01 ಕ್ಕೆ ಹೊರಟ ಈ ರೈಲು, ಶಂಕರಿ ಬ್ಲಾಕ್‌ನ ಕಲಿಗೌಂಡಂಪಾಲಯಂ ಹಳಿಗೆ ಆಗಮಿಸುತ್ತಿದ್ದಾಗ, ಚಾಲಕನಿಗೆ ಚಕ್ರಗಳ ಕೆಳಗಿಂದ ಅಸಾಧಾರಣ ರುಬ್ಬುವ ರೀತಿಯ ಶಬ್ದ ಹಾಗೂ ಕಿಡಿಗಳು ಕಾಣಿಸಿಕೊಂಡವು. ತಕ್ಷಣವೇ ಅಪಾಯವನ್ನು ಅರಿತ ಲೋಕೊ ಪೈಲಟ್, ರೈಲನ್ನು ನಿಧಾನಗೊಳಿಸಿ ನಿಲ್ಲಿಸಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದನು.

ಅನಂತರದ ಪರಿಶೀಲನೆ ವೇಳೆ, ರೈಲ್ವೆ ಹಳಿಯ ಮೇಲೆ ಸುಮಾರು 10 ಅಡಿ ಉದ್ದದ ಕಬ್ಬಿಣದ ರಾಡ್ ಅನ್ನು ಉದ್ದೇಶಪೂರ್ವಕವಾಗಿ ಇಡಲಾಗಿದ್ದುದಾಗಿ ತಿಳಿದುಬಂದಿದೆ. ಘಟನೆ ನಡೆದ ಸ್ಥಳದಲ್ಲಿ ತಕ್ಷಣ ತನಿಖೆ ನಡೆಸಿದ ಲೋಕೊ ಪೈಲಟ್‌ಗಳು ಎಂಜಿನ್ ಕೆಳಗೆ ಸಿಲುಕಿರುವ ಲೋಹದ ರಾಡ್ ಪತ್ತೆಹಚ್ಚಿದರು. ಅದು ಓರ್ವ ಮನುಷ್ಯನಿಗೆ ಎತ್ತಿಕೊಂಡು ಹೋಗದಷ್ಟು ತೂಕವಾಗಿತ್ತು. ಕೂಡಲೇ ಸೇಲಂ ರೈಲ್ವೆ ವಿಭಾಗದ ಅಧಿಕಾರಿಗಳು, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಹಾಗೂ ಮಗುಡಂಚವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಇನ್ನು ಪವಾಡ ಸದೃಶ್ಯ ಎಂಬಂತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಅದರಲ್ಲಿ ಮುಖ್ಯವಾಗಿ ಮದ್ರಾಸ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರೂ ಸೇರಿದಂತೆ, ಎಲ್ಲರೂ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಈ ಘಟನೆ ಕುರಿತಾಗಿ ಪೊಲೀಸರು ಈಗಾಗಲೇ ಅಧಿಕೃತ ತನಿಖೆಯನ್ನು ಪ್ರಾರಂಭಿಸಿದ್ದು, ರೈಲ್ವೆ ಇಲಾಖೆ ಕೂಡ ತನ್ನ ಆಂತರಿಕ ತನಿಖೆಯನ್ನು ಆರಂಭಿಸಿದೆ

Comments are closed.