ಮಹಾಭಾರತ ಕಥೆ -3: ಕೊಳೆತ ಶವದ ಮುಂದೆ ದ್ವೇಷದ ಚಿತೆ ಬೆಳಗಿಸಿ ಬದುಕಿದ್ದ ಶಕುನಿ!

ಕೃಪೆ: ಹೊಸಕನ್ನಡ ವಾರಪತ್ರಿಕೆ
ನಿರೂಪಣೆ: ಸುದರ್ಶನ್ ಬಿ. ಪ್ರವೀಣ್, ಬೆಳಾಲು
ರಣರಂಗದಲ್ಲಿ ಮುರಿದುಬಿದ್ದ ರಥದ ಚಕ್ರಕ್ಕೆ ತಲೆಯೊಡ್ಡಿ ಕಣ್ಣುಮುಚ್ಚಿ ಕುಳಿತು ಸಾವಿಗೆ ಕ್ಷಣಕ್ಷಣಕ್ಕೂ ಹತ್ತಿರವಾಗುತ್ತಿದ್ದ ಶಕುನಿ. ಹರಿದು ಹೋಗುತ್ತಿರುವುದು ಬೆವರಾ ಅಥವಾ ರಕ್ತವಾ ಎಂದು ಅರಿಯದ ಸಮಯ. ಮಂಜಾಗುತ್ತಿರುವ ಕಣ್ಣ ಮುಂದೆ ನಿಧಾನವಾಗಿ ತಂಪಾದ ಗಾಳಿಯಾಡುತ್ತದೆ. ಎಚ್ಚೆತ್ತ ಶಕುನಿಗೆ ಅಲ್ಲಿ ಕೊಳೆತ ಹೆಣಗಳ ದುರ್ವಾಸನೆ ಬರುತ್ತಿತ್ತು. ಎಲ್ಲೆಲ್ಲೂ ಯೋಧರ ಅಂಗಗಳು ರಸ್ತೆಯಲ್ಲಿ ಎಡತಾಕುವ ಕಲ್ಲುಗಳ ಥರ ತೊಡರುಗಾಲು ಹಾಕುತ್ತಿದ್ದವು. ದೂರದಿಂದ ಅರ್ತನಾದಗಳು ಕೇಳಿಬರುತ್ತಿದ್ದವು. ನರಿಗಳು ಉಲ್ಲಾಸದಿಂದ ಹೂಳಿಡುತ್ತಿದ್ದವು. ಅತ್ತ ಭೀಷ್ಮನ ನರಳಾಟ, ಕರ್ಣನ ಸಾವಿನಿಂದ ಕೂಗು ಹಾಕುತ್ತಿರುವ ಸುಯೋದನ, ಮಕ್ಕಳನ್ನು ಕಳೆದು ಕೊಂಡೆನಲ್ಲ ಎಂದು ಅಸಹಾಯಕನಾಗಿ ದುಃಖಿಸುತ್ತಿರುವ ದೃತರಾಷ್ಟ್ರ. ಕೌರವ ಸಹೋದರರೆಲ್ಲರ ಸಾವು- ಒಟ್ಟಾರೆ ಭೀಭತ್ಸ ವಾತಾವರಣ. ಸ್ವತಃ ತಾನೇ ಯುದ್ಧದಲ್ಲಿ ಗಾಯಗೊಂಡು ಸಾಯುವ ಸ್ಥಿತಿಯಲ್ಲಿದ್ದಾನೆ ಶಕುನಿ. ಆಗ ಮೂಡುತ್ತೆ ಸದಾ ಗಂಟಿಕ್ಕಿ ಇರುತ್ತಿದ್ದ ಮುಖದಲ್ಲಿ ಒಂದು ಸಣ್ಣ ಕಿರುನಗೆ, ಏನೋ ಸಾಧಿಸಿದ ಮಂದಹಾಸ.
ಮಹಾಭಾರತದಲ್ಲಿ ಶಕುನಿಯದು ವಿಲನ್ ಪಾತ್ರ. ಆತ ಒಬ್ಬ ಖಳನಾಯಕ ಅಂದುಬಿಟ್ಟು ಆತನನ್ನು ಒಂದಷ್ಟು ತೆಗಳಿ ಬೈದು ಬದಿಗೆ ಸರಿಸಿ ಬಿಡುವಂತಹ ವ್ಯಕ್ತಿತ್ವವಲ್ಲ ಶಕುನಿಯದು. ಶಕುನಿ ಅಸಾಧಾರಣ ಪ್ರತಿಭೆ. ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವುದಕ್ಕೆ, ಹಠ ಸಾಧನೆಗೆ, ಅನೂಹ್ಯ ತಂತ್ರಗಾರಿಕೆಗೆ, ಯಾವತ್ತೂ ಸೋಲದ ಮನಸ್ಥಿತಿಗೆ, ಸಾವಿನ ಅಂಚಿನಲ್ಲಿ ಕೂಡ ಬದುಕಿನತ್ತ ದಿಟ್ಟ ನೋಟ ಹಾಕಿ ನಿಂತ ಪರಾಕ್ರಮಕ್ಕೆ ಪ್ರತಿರೂಪ ಈ ಶಕುನಿ. ಆ ಮೂಲಕ, ನಾವು ಕೆಟ್ಟವರು ಅಂದುಕೊಂಡಿರುವ ಕೌರವರ ಪರವಾಗಿ ನಿಂತ ಆತ ಕೂಡಾ ಕೆಟ್ಟವ ಅಂತ ಸಾರಾಸಗಟಾಗಿ ಹೇಳಿಬಿಡುವ ಹಾಗಿಲ್ಲ. ಮಹಾಭಾರತ ಯುದ್ಧದಲ್ಲಿ ಲಕ್ಷಾಂತರ ಜನರ ಸಾವಿಗೆ ಈ ಶಕುನಿ ಕಾರಣ ಆಗಿದ್ದರೂ, ಆತ ಅದನ್ನೆಲ್ಲ ಯಾಕೆ ಮಾಡಿದ ಅನ್ನೋದು ನಮ್ಮ ಗಮನ ಸೆಳೆಯುತ್ತದೆ.
ಅಂದು ಶಕುನಿ ಫ್ಯಾಮಿಲಿ ಮ್ಯಾನ್ ಆಗಿದ್ದ. ತನ್ನ ಅಪ್ಪ, ಅಮ್ಮ , ಒಡಹುಟ್ಟಿದವರನ್ನು ಆತ ಉತ್ಕಟವಾಗಿ ಪ್ರೀತಿಸುತ್ತಿದ್ದ. ಧೃತರಾಷ್ಟ್ರನ ಮಡದಿ, ಆತನ ತಂಗಿ ಗಾಂಧಾರಿ ಅಂದರೆ ಆತನಿಗೆ ಅತ್ಯಂತ ಇಷ್ಟವಿತ್ತು. ಅದೇ ಕುಟುಂಬ ಪ್ರೀತಿಯು ಆತನಲ್ಲಿ ಕಿಚ್ಚನ್ನು, ದಾವಾನಲವನ್ನು ಉಂಟು ಮಾಡಿದ್ದು, ಆ ಕಿಚ್ಚಿಗೆ ಇಡೀ ಕೌರವ ವಂಶ ಮುಂದೆ ನಿರ್ನಾಮವಾಗಿ ಹೋಯಿತು.
ಇಂದಿನ ಅಫ್ಘಾನಿಸ್ತಾನವೇ ನಮ್ಮ ಪ್ರಾಚೀನ ಭಾರತದ ಗಾಂಧಾರ. ಈ ರಾಜ್ಯವನ್ನು ಗಾಂಧಾರ ರಾಜ ಶುಭಲ ಮಹಾರಾಜ ಅಳುತ್ತಿದ್ದ. ಶಕುನಿ ತನ್ನ ತಂಗಿ ಗಾಂಧಾರಿಯನ್ನು ತುಂಬಾ ಪ್ರೀತಿಸುತ್ತಿದ್ದ. ಅವಳು ಚಿಕ್ಕವಳು, ಅದ್ಭುತ ಸುಂದರಿ ಮತ್ತು ಅಪಾರ ಬುದ್ಧಿವಂತಳು. ಆಕೆಗೆ ಸುಂದರ ರಾಜಕುಮಾರನ ಜತೆ ಮದುವೆ ಮಾಡಬೇಕೆಂದು ಆತ ಬಯಸಿದ. ಆದರೆ ಭೀಷ್ಮನು ಕುರುಡ ರಾಜಕುಮಾರ ಒಬ್ಬನ ಮದುವೆ ಪ್ರಸ್ತಾಪವನ್ನು ಆಕೆಗೆ ತರುತ್ತಾನೆ. ಶಕುನಿಯ ಅಪ್ಪನಾದ ಗಾಂಧಾರ ರಾಜನಿಗೆ ಆ ಮದುವೆ ಇಷ್ಟ ಇರೋದಿಲ್ಲ. ಅದನ್ನು ಆತ ಹೇಳಿ ಕಳಿಸುತ್ತಾನೆ. ಸಲ್ಪ ಸಮಯದ ನಂತರ ಗಾಂಧಾರ ರಾಜ ಯೋಚಿಸುತ್ತಾನೆ. ಅವತ್ತಿಗೆ ಹಸ್ತಿನಾಪುರದ ರಾಜಧಾನಿಯಲ್ಲಿ ಕುರು ಸಾಮ್ರಾಜ್ಯ ಅಗಾಧವಾಗಿತ್ತು. ಆ ದೊಡ್ಡ ಪ್ರಬಲ ರಾಜಮನೆತನವನ್ನು ಎದುರು ಹಾಕಿಕೊಂಡರೆ ತಾವು ಜೀವ ಉಳಿಸಿಕೊಳ್ಳುವುದು ಕಷ್ಟ ಎಂದು ಭಾವಿಸಿದಾಗ ಗಾಂಧಾರ ರಾಜನು ತನ್ನ ಪುತ್ರಿ ಗಾಂಧಾರಿಯನ್ನು ಕುರುಡು ರಾಜ ಧೃತರಾಷ್ಟ್ರನಿಗೆ ಮದುವೆ ಮಾಡಲು ಒಪ್ಪುತ್ತಾನೆ.
ಅವತ್ತು ಹಾಗೆ ಒಪ್ಪಿಕೊಳ್ಳುವುದನ್ನು ಬಿಟ್ಟು ಆತನಿಗೆ ಬೇರೆ ದಾರಿಯೇ ಕಾಣಲಿಲ್ಲ. ಆ ಸಂದರ್ಭ ಶಕುನಿ ಅರಮನೆಯಲ್ಲಿ ಇರಲಿಲ್ಲ. ಶಕುನಿ ಹಿಂತಿರುಗಿ ಅರಮನೆಗೆ ಬಂದಾಗ ತನ್ನ ತಂಗಿ ಕುರುಡ ರಾಜಕುಮಾರನನ್ನು ಮದುವೆಯಾಗಬೇಕಾಗಿ ಬಂದಿರುವ ಅನಿವಾರ್ಯ ಪರಿಸ್ಥಿತಿ ಆತನಿಗೆ ತೀವ್ರ ಬೇಸರ ತರಿಸುತ್ತದೆ. ತಂಗಿಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡಲು ಯಾವುದೇ ಆಯ್ಕೆ ನೀಡಲಾಗಿಲ್ಲ ಅನ್ನೋದೇ ಆತನನ್ನು ದುಃಖಕ್ಕೆ ಈಡು ಮಾಡುತ್ತದೆ ಮತ್ತು ಅದಕ್ಕಾಗಿ ಆತ ರೋಧಿಸುತ್ತಾನೆ.
ನಂತರ ಗಾಂಧಾರಿಗೆ ಕುರುಡ ದೃತರಾಷ್ಟ್ರನ ಜೊತೆ ಮದುವೆಯಾಗುತ್ತದೆ. ತನ್ನ ಪತಿಗೆ ಕಣ್ಣು ಕಾಣದೆ ಇರುವಾಗ ನಾನ್ಯಾಕೆ ಬೆಳಕು ನೋಡಲಿ ಎಂದು ಗಾಂಧಾರಿ ತನ್ನ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಳ್ಳುತ್ತಾಳೆ. ಹಾಗೆ ಆಕೆ ಶಾಶ್ವತವಾಗಿ ಬಲವಂತವಾಗಿ ಅಂಧತ್ವ ಸ್ವೀಕರಿಸುತ್ತಾಳೆ.
ಗಾಂಧಾರಿಗೆ ಸಣ್ಣ ಪ್ರಾಯದಿಂದಲೇ ಕತ್ತಲೆ ಅಂದ್ರೆ ಭಯ. ರಾತ್ರಿಯಲ್ಲಿ ತನ್ನ ಕೋಣೆಯಲ್ಲಿ ಬೆಳಕು ಇಲ್ಲದೆ ಇದ್ದರೆ ಆಕೆ ಕಂಪಿಸುತ್ತಿದ್ದಳು. ಕೊನೆಯ ಪಕ್ಷ ಒಂದು ಮಿಣುಕು ಹುಳುವಾದರೂ ಕತ್ತಲೆಯನ್ನು ಓಡಿಸಲು ಆಕೆಗೆ ಸಂಗಾತಿಯಾಗಿ ಇರಬೇಕಿತ್ತು. ಅಂತಹ ಕತ್ತಲ ಎಡೆಗಿನ ಭಯದ ಜೊತೆ ಬೆಳೆದ ಹುಡುಗಿ ಗಾಂಧಾರಿ ಈಗ ಕತ್ತಲನ್ನು ಶಾಶ್ವತವಾಗಿ ನೋಡಬೇಕಾಗಿ ಬಂದಿತ್ತು. ಅದು ಆಕೆಯ ಪ್ರೀತಿಯ ಅಣ್ಣ ಶಕುನಿಯ ಮನಸ್ಸು ಕಲಕಿತ್ತು. ಆದರೂ ಆತನಲ್ಲಿ ಕುರುವಂಶದ ಕಡೆಗೆ ದ್ವೇಷ ಭಾವ ಯಾವತ್ತೂ ಮೂಡಿರಲಿಲ್ಲ.
ಆದರೆ ಜೀವ ತೆತ್ತಾದರೂ ಕುರುವಂಶದ ನಿರ್ನಾಮ ಮಾಡಿಯೇ ತೀರುತ್ತೇನೆ ಎಂದು ಶಕುನಿ ಶಪಥ ಮಾಡಲು ಕಾರಣವಾದದ್ದು ಅದೊಂದು ಘಟನೆ.
ಗಾಂಧಾರಿಯ ಮದುವೆಯ ನಂತರ ಗಾಂಧಾರಿಗೆ ಈ ಹಿಂದೆಯೇ ಒಂದು ಮದುವೆಯಾಗುವ ವಿಚಾರ ಧೃತರಾಷ್ಟ್ರನಿಗೆ ತಿಳಿಯುತ್ತದೆ. ಹೌದು, ಗಾಂಧಾರಿಗೆ ಈ ಹಿಂದೆ ಒಂದು ಮದುವೆಯಾಗಿತ್ತು. ಜ್ಯೋತಿಷಿಗಳ ಪ್ರಕಾರ ಗಾಂಧಾರಿ ಮೊದಲು ಮದುವೆಯಾಗುವ ಪತಿ ಆಕೆಯ ಮದುವೆಯ ಕೆಲವೇ ದಿನಗಳಲ್ಲಿ ಸಾಯುತ್ತಾನೆ ಎನ್ನಲಾಗಿತ್ತು. ಮಗಳು ಮದುವೆಯಾಗುತ್ತಿದ್ದಂತೆ ಅಳಿಯ ಸತ್ತರೆ ಯಾವ ಅಪ್ಪನಿಗಾದರೂ ನೋವು ಆಗದೆ ಇರುತ್ತಾ? ಹಾಗಾಗಿ ಜ್ಯೋತಿಷಿಗಳ ಸಲಹೆಯಂತೆ ಗಾಂಧಾರ ರಾಜನು ಮಗಳಿಗೆ ಒಂದು ಮೇಕೆಯ ಜೊತೆ ಮದುವೆ ಮಾಡುತ್ತಾನೆ. ಮದುವೆ ನಂತರ ತಕ್ಷಣ ಮೇಕೆಯನ್ನು ಬಲಿಕೊಡುತ್ತಾನೆ.
ಇತ್ತ ಗಾಂಧಾರಿಯ ಮತ್ತು ಧೃತರಾಷ್ಟ್ರನ ಮದುವೆಯ ನಂತರ ಈ ವಿಚಾರ ಧೃತರಾಷ್ಟ್ರ ಮತ್ತು ಕುರು ವಂಶಕ್ಕೆ ತಿಳಿದು ಈಗಾಗಲೇ ಗಾಂಧಾರಿಗೆ ಒಂದು ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟ ಕಾರಣ ಗಾಂಧಾರ ರಾಜನನ್ನು ಕುಟುಂಬ ಸಮೇತ ಧೃತರಾಷ್ಟ್ರ ಬಂಧಿಸುತ್ತಾನೆ. ಆ ಇಡೀ ಕುಟುಂಬವನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿಹಾಕಿ ಒಂದು ಮುಷ್ಟಿ ಒಳಗೆ ಹೋಗುವಷ್ಟು ಮಾತ್ರ ಜಾಗವನ್ನು ಬಿಟ್ಟು ಅದರಲ್ಲಿ ದಿನಕ್ಕೆ ಒಂದು ಬಾರಿ ಒಂದು ಹಿಡಿ ಅನ್ನ, ಒಂದು ಗ್ಲಾಸು ನೀರನ್ನು ಕೊಡಲಾಗುತ್ತದೆ. ಒಬ್ಬನಿಗೆ ಸಾಕಾಗದ ಇಷ್ಟು ಕಡಿಮೆ ಪ್ರಮಾಣದ ಆಹಾರ ಇಡೀ ಕುಟುಂಬಕ್ಕೆ ಎಲ್ಲಿ ಸಾಕಾಗುತ್ತದೆ? ಹಾಗಾಗಿ ಆಹಾರ ನೀರು ಇಲ್ಲದೆ ಶಕುನಿ ಸಮೇತ ಇಡೀ ಕುಟುಂಬ ನರಳುತ್ತದೆ. ಎಲ್ಲರ ದೇಹಗಳೂ ಕೃಷವಾಗುತ್ತವೆ.
ಹೀಗೇ ಆದರೆ ನಾವು ಎಲ್ಲರೂ ಸಾಯುವುದು ದಿಟ. ನಮ್ಮಲ್ಲಿ ಯಾರಾದರೂ ಒಬ್ಬರಾದರೂ ಬದುಕಿರಲೇ ಬೇಕು. ಇಲ್ಲಿಂದ ಜೀವಂತ ಹೊರಬಂದು, ನಮ್ಮ ಇವತ್ತಿನ ಪರಿಸ್ಥಿತಿಗೆ ಕಾರಣವಾದ ಇಡೀ ಕುರುವಂಶವನ್ನೆ ನಿರ್ನಾಮ ಮಾಡಬೇಕು ಎಂದು ಗಾಂಧಾರ ರಾಜ ಅಪ್ಪಣೆ ಕೊಡುತ್ತಾನೆ. ಅದಕ್ಕೆ ಆತನ ಎಲ್ಲಾ ಮಕ್ಕಳು ಸಮ್ಮತಿಸುತ್ತಾರೆ. ಆದರೆ ಆ ಒಬ್ಬನಿಗಾಗಿ ಎಲ್ಲರೂ ಆಹಾರ ನೀರು ಮುಟ್ಟದೆ ಸಾಯಲು ನಿರ್ಧರಿಸುತ್ತಾರೆ. ಇರುವ ಮಕ್ಕಳಲ್ಲಿ ಯಾರು ಅತ್ಯಂತ ಚಾಣಾಕ್ಷನೋ ಆತ ಬದುಕಲಿ, ಉಳಿದವರೆಲ್ಲ ಸಾಯೋಣ ಎಂದು ಕುಟುಂಬ ನಿರ್ಧರಿಸುತ್ತದೆ: ಕತ್ತಲ ಕೋಣೆಯ ಒಳಗೆ ಒಂದು ಜ್ವಾಲಾಮುಖಿಯಂತೆ ಉರಿಯುವ ದ್ವೇಶಾಗ್ನಿ ಅವತ್ತು ರೂಪುಗೊಳ್ಳುತ್ತದೆ!!
ಅಲ್ಲಿರುವ ತನ್ನ ಮಕ್ಕಳಲ್ಲಿ ಓರ್ವ ಬುದ್ದಿವಂತ ಹುಡುಗನನ್ನು ಆಯ್ಕೆ ಮಾಡುವ ಒಂದು ಪಂದ್ಯವನ್ನು ಗಾಂಧಾರ ರಾಜ ಆ ಕತ್ತಲ ಕೋಣೆಯಲ್ಲಿಯೇ ಏರ್ಪಡಿಸುತ್ತಾರೆ. ಆಗ ಆಯ್ಕೆ ಆದವನೇ ಬುದ್ಧಿಯಲ್ಲಿ ಬಿರುಸಿನ, ಯುಕ್ತಿಯಲ್ಲಿ ತುರುಸಿನ ಶಕುನಿ!
ಅಲ್ಲಿ ಕತ್ತಲ ಬಂಧನದ ಜಗತ್ತಿನ ಒಳಗೆ ನಡೆದ ಯುದ್ಧ ತಂತ್ರದ ಬಗ್ಗೆ, ಹೊರ ಜಗತ್ತಿನಲ್ಲಿ ವಿಲಾಸದ ಮತ್ತು ದರ್ಪದ ಜತೆ ರಾಜ್ಯಭಾರ ಮಾಡುತ್ತಿರುವ ಕೌರವರಿಗೆ ತಿಳಿಯುವುದಾದರೂ ಹೇಗೆ?
ಅವತ್ತು ಕಣ್ಣಲ್ಲಿ ಮೈಯಲ್ಲಿ ದ್ವೇಷವನ್ನು ಅದುಮಿ ಅಡಗಿಸಿಕೊಂಡು ಕುಳಿತ ಶಕುನಿಯು ದಿನಕ್ಕೆ ಒಂದು ಮುಷ್ಟಿ ಅನ್ನದಲ್ಲಿ ತಿಂಗಳಾನುಗಟ್ಟಲೆ ಬಾಳುತ್ತಾನೆ. ಆತನ ಕಣ್ಣೆದುರೇ ಅಪ್ಪ ತಮ್ಮಂದಿರು ಒಬ್ಬೊಬ್ಬರಾಗಿ ಸಾಯುತ್ತಾರೆ. ಅವರ ಕೊಳೆತ ಶವದ ಮುಂದೆ ದ್ವೇಷದ ಚಿತೆ ಬೆಳಗಿಸಿ ಆತ ಬದುಕು ಸಾಗಿಸುತ್ತಾನೆ.
ಮುಂದೊಂದು ದಿನ, ಇನ್ನು ಇವರ್ಯಾರೂ ಬದುಕಿ ಇರೋದು ಸಾಧ್ಯವೇ ಅಲ್ಲ ಅನ್ನಿಸಿದಾಗ, ಅದ್ಯಾಕೋ ಒಂದು ದಿನ ದುರ್ಯೋಧನ ಆ ಕೋಣೆಯ ಬಾಗಿಲು ತೆಗೆಸುತ್ತಾನೆ. ಎಲ್ರೂ ಸತ್ತು, ಶವಗಳು ಕೊಳೆತು ಬಾಡಿ ಒಣಗಿ ಹೋಗಿದ್ದರೂ ಅವನೊಬ್ಬ ಮಾತ್ರ ಬದುಕಿದ್ದ! ದುರ್ಯೋಧನ ಆಶ್ಚರ್ಯದಿಂದ ಬೆಚ್ಚಿ ಬಿದ್ದುದು ಶಕುನಿ ಬದುಕಿದ್ದುದಕ್ಕೆ ಅಲ್ಲ, ಬದಲಾಗಿ ಆತನ ಜೀವನೋತ್ಸಾಹಕ್ಕೆ.
ಮುಂದೆ ಶಕುನಿಯು ತನ್ನ ಭಾವ ಧೃತರಾಷ್ಟ್ರನ ಕಾಲು ಹಿಡಿದು ಬದುಕಲು ಅವಕಾಶ ಬೇಡುತ್ತಾನೆ. ಆ ಹೊತ್ತಿಗಾಗಲೇ ಗಾಂಧಾರ ರಾಜ ಸುಬಲ ಸತ್ತಿದ್ದು ಇಡೀ ಕುಟುಂಬ ಸರ್ವನಾಶವಾದ ಕಾರಣ ಆತನ ಸಿಟ್ಟು ತಗ್ಗಿರುತ್ತದೆ. ಶಕುನಿಗೆ ಪ್ರಾಣಭಿಕ್ಷೆ ನೀಡಲಾಗುತ್ತದೆ. ಅಂದು ಕುರು ವಂಶದ ಸರ್ವನಾಶಕ್ಕೆ ಮುಹೂರ್ತ ನಿಗದಿಯಾಗುತ್ತದೆ….!!
Comments are closed.