Road bandh: ಹುಲಿಕಲ್ ಘಾಟಿಯಲ್ಲಿ ಆ್ಯಕ್ಸೆಲ್ ಕಟ್ ಆಗಿ ನಿಂತ ಲಾರಿ – ರಾತ್ರಿಯಿಂದ ಉಡುಪಿ-ಶಿವಮೊಗ್ಗ ಸಂಚಾರ ಬಂದ್

Share the Article

Road bandh: ಶಿವಮೊಗ್ಗದ ಹುಲಿಕಲ್ ಘಾಟಿಯ ಶಂಕರನಾರಾಯಣ ದೇವಸ್ಥಾನದ ಬಳಿ ಸೋಮವಾರ ತಡರಾತ್ರಿ ಹೇರ್ ಪಿನ್ ತಿರುವಿನಲ್ಲಿ ಲಾರಿಯೊಂದು ಆ್ಯಕ್ಸೆಲ್ ತುಂಡಾಗಿ ರಸ್ತೆಯಲ್ಲೇ ನಿಂತಿದ್ದು, ಇದರಿಂದಾಗಿ 7 ಗಂಟೆಗಳಿಂದ ಉಡುಪಿ-ಶಿವಮೊಗ್ಗ ಜಿಲ್ಲೆಗಳ ನಡುವಿನ ವಾಹನ ಸಂಚಾರ ಸ್ಥಗಿತವಾಗಿದೆ. ನಿರಂತರ ಮಳೆಯ ನಡುವೆ ನೂರಾರು ವಾಹನಗಳು ಘಾಟಿಯಲ್ಲೇ ಉಳಿದಿವೆ. “ಹೊಸನಗರ ಪೊಲೀಸರಿಗೆ ಕರೆ ಮಾಡಿ ಲಾರಿ ತೆರವಿಗೆ ಮನವಿ ಮಾಡಿದರೆ ಸ್ಪಂದಿಸಲಿಲ್ಲ. ಕ್ರೇನ್‌ನವರು ಬರಲು ಒಪ್ಪುತ್ತಿಲ್ಲ” ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ರಾತ್ರಿ ಇದೆಲ್ಲಾ ಕಷ್ಟ. ಬೆಳಕಾಗಲಿ ಎಂದಿದ್ದಾರೆ ಪೊಲೀಸರು. ಹಾಗಾಗಿ ಪೊಲೀಸರು ಏನು ಮಾಡಲು ಅಸಾಧ್ಯ ಎಂದು ಪ್ರಯಾಣಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಿಂದ ಉಡುಪಿ ಜಿಲ್ಲೆ ಸಿದ್ದಾಪುರದ ಕಡೆ ಹೊರಟ ಸರಕು ಹೊತ್ತ ಲಾರಿ ರಸ್ತೆ ಮಧ್ಯೆ ಸಿಲುಕಿ ಟ್ರಾಫಿಕ್‌ ಜಾಮ್ ಆಗಿತ್ತು. ಆದರೆ ಇತ್ತ ಸಂಚಾರ ಸುಗಮಗೊಳಿಸುವ ಬಗ್ಗೆ ತಲೆನೇ ಕೆಡಿಸಿಕೊಳ್ಳದ ಚಾಲಕ ಮತ್ತು ಕ್ಲೀನರ್ ಅರಾಮವಾಗಿ ನಿದ್ರೆಗೆ ಜಾರಿದ್ದರು.

ಅತ್ತ ಜೋರಾಗಿ ಸುರಿಯುತ್ತಿದ್ದ ಮಳೆ, ಚಳಿಗೆ ಬಸ್ ನಲ್ಲಿದ್ದ ಮಕ್ಕಳು, ಮಹಿಳೆಯರ ಸ್ಥಿತಿ ಹೇಳತೀರದಾಗಿತ್ತು. ಹುಲಿಕಲ್ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವ ಮಾಹಿತಿ ತಿಳಿದ ನಂತರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕ್ರೇನ್ ಒಯ್ದು ತಕ್ಷಣ ಲಾರಿ ತೆರವುಗೊಳಿಸಲು ಹೊಸನಗರ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇಂದು ಕೆಲ ಹೊತ್ತಿನ ಹಿಂದೆಯಷ್ಟೆ ಘಾಟಿ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ.

ಭೂ ಕುಸಿತದ ಭೀತಿಯಿಂದ ಭಾರೀ ಮಳೆಯ ಕಾರಣ ಕಳೆದ ವಾರದಿಂದ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ಕರಾವಳಿ ಸಂಪರ್ಕಕ್ಕೆ ಶಿವಮೊಗ್ಗ ಜಿಲ್ಲೆಯ ಮಂದಿ ಹುಲಿಕಲ್ ಘಾಟಿನ್ನು ಅವಲಂಭಿಸಬೇಕಾಗಿದೆ. ಹೀಗಾಗಿ ವಾಹನ ದಟ್ಟಣೆ ಹೆಚ್ಚಾಗಿದ್ದು, ವಾರದ ಹಿಂದೆ ಇದೇ ಹುಲಿಕಲ್ ಘಾಟಿಯಲ್ಲೂ ಗುಡ್ಡ ಕುಸಿತ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಣ್ಣು ಬಿದ್ದ ಪರಿಣಾಮ ಕೆಲವು ಕಡೆ ಕಿರಿದಾದ ದಾರಿಯಲ್ಲಿ ವಾಹನಗಳು ಸಂಚರಿಸಬೇಕಾದ ಅನಿವಾರ್ಯವಿದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಬೇಕಾಗಿ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Comments are closed.