Mixed fruits juice: ನೀವು ಮಿಶ್ರ ಹಣ್ಣಿನ ರಸವನ್ನು ಕುಡಿಯುತ್ತಿರಾ? ಕೂಡಲೇ ನಿಲ್ಲಿಸಿ – ಇದು ದೇಹಕ್ಕೆ ಅಪಾಯಕಾರಿಯಾಗಬಹುದು

Mixed fruits juice: ಹಣ್ಣುಗಳನ್ನು ತಿನ್ನುವುದು ಪೌಷ್ಟಿಕ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಬಹುದು. ಇದರಲ್ಲಿ ವಿವಿಧ ವಿಟಮಿನ್ ಗಳು, ಮಿನರಲ್ ಗಳು, ಕಾರ್ಬೋಹೈಡ್ರೇಟ್ ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿದ್ದು, ಇದು ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ಹಣ್ಣಿನ ಜ್ಯೂಸ್ ಕುಡಿಯುವ ಗೀಳು ಬೆಳೆದು ಬಿಟ್ಟಿದೆ. ಹೆಚ್ಚಿನ ಜನರು ಹಣ್ಣನ್ನು ತಿನ್ನುವ ಬದಲು ಅದರ ರಸವನ್ನು ಕುಡಿಯುತ್ತಾರೆ. ವಿಶೇಷವಾಗಿ, ಮಿಶ್ರ ಹಣ್ಣಿನ ರಸವು ಹೆಚ್ಚು ಪ್ರಯೋಜನಕಾರಿ ಎಂದುಕೊಳ್ಳುತ್ತಾರೆ. ಇದರಿಂದಾಗಿ, ಮಿಶ್ರ ಹಣ್ಣಿನ ರಸಕ್ಕೆ ಬೇಡಿಕೆಯೂ ಹೆಚ್ಚಿದೆ. ಇದು ದೇಹಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ ಸತ್ಯವೇನೆಂದರೆ, ಹಣ್ಣನ್ನು ಜ್ಯೂಸ್ ಮಾಡಿದಾಗ, ಅದರಲ್ಲಿರುವ ಅನೇಕ ಪೋಷಕಾಂಶಗಳು ಕಳೆದುಹೋಗುತ್ತವೆ. ಫೈಬರ್ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳು ಸಹ ಕಳೆದುಹೋಗುತ್ತವೆ. ಹಣ್ಣಿನ ರಸದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಮಿಶ್ರ ಹಣ್ಣಿನ ರಸವನ್ನು ಏಕೆ ಕುಡಿಯಬಾರದು?
ಮೊದಲನೆಯದಾಗಿ ಹಣ್ಣುಗಳನ್ನು ತಿನ್ನಬೇಕೆ ಹೊರತು ಕುಡಿಯಬಾರದು, ಏಕೆಂದರೆ, ಮಿಶ್ರ ಹಣ್ಣಿನ ರಸಗಳು ಕ್ಯಾಲೋರಿಗಳಲ್ಲಿ ತುಂಬಾ ಹೆಚ್ಚು. ಒಂದು ಕಪ್ ರಸದಲ್ಲಿ 117 ಕ್ಯಾಲೊರಿಗಳು ಇರುತ್ತವೆ. ಇದಲ್ಲದೆ, ಇದರಲ್ಲಿ ಫ್ರಕ್ಟೋಸ್ ಕೂಡ ಅಧಿಕವಾಗಿದೆ. ಒಂದು ಕಪ್ ರಸವು ಸುಮಾರು 21 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ. ರಸದ ರೂಪದಲ್ಲಿ ನೀವು ಇದನ್ನು ಸಹಜವಾಗಿ ಸೇವಿಸಬಹುದು. ಅಂದರೆ, ಹೆಚ್ಚಿನ ಕ್ಯಾಲೋರಿಗಳು ನಿಮ್ಮ ದೇಹ ಸೇರುತ್ತವೆ. ಅದೇ ಹಣ್ಣುಗಳನ್ನು ತಿಂದಾಗ ಅದರಲ್ಲಿನ ನಾರಿನ ಅಂಶ ಹಾಗೂ ಇತರ ಘಟಕಗಳು ಬೇಗ ಹೊಟ್ಟೆ ತುಂಬಿಸುತ್ತವೆ. ಅದರಲ್ಲಿನ ಒಟ್ಟು ಸಕ್ಕರೆಯ ಪ್ರಮಾಣ ಕಡಿಮೆ ಇರುತ್ತದೆ. ಅಲ್ಲದೆ, ಹಣ್ಣಿನಲ್ಲಿರುವ ನಾರಿನ ಅಂಶ ಮತ್ತು ಇತರ ಘಟಕಗಳು ಆ ಸಕ್ಕರೆ ಹಾನಿಕಾರಕವಾಗದಂತೆ ತಡೆಯುತ್ತವೆ.
ಹಣ್ಣಿನ ರಸವು ರಕ್ತದಲ್ಲಿನ ಸಕ್ಕರೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಅನೇಕ ಹಣ್ಣುಗಳ ರಸಗಳನ್ನು ಮಿಶ್ರಣ ಮಾಡಿದಾಗ ಅವುಗಳ ಉಪಯುಕ್ತತೆ ಕುಗ್ಗುತ್ತದೆ. ಮಿಶ್ರ ಹಣ್ಣಿನ ರಸವನ್ನು ತಯಾರಿಸುವಾಗ, ಘನ ರೂಪದ ಘಟಕಗಳನ್ನು ಎಸೆಯಲಾಗುತ್ತದೆ. ಹೀಗಾಗಿ, ರಸವು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಮಾತ್ರ ಹೊಂದಿರುತ್ತದೆ. ಆದರೆ ತಿರಸ್ಕರಿಸಿದ ಘನ ಭಾಗವು ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶ ಮತ್ತು ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ನಾರಿನಂಶ ಮತ್ತು ಪೋಷಕಾಂಶಗಳೆ ಆರೋಗ್ಯಕ್ಕೆ ಅಧಿಕ ಮಹತ್ವದ್ದಾಗಿರುತ್ತದೆ.
ಫ್ರುಕ್ಟೋಸ್ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದಿಲ್ಲ. ಆದರೆ, ಇದು ಫ್ಯಾಟಿ ಲಿವರ್ ಮತ್ತು ಬೊಜ್ಜಿಗೆ ಕಾರಣವಾಗಬಹುದು. ಮಾರುಕಟ್ಟೆಯಲ್ಲಿ ಹಣ್ಣಿನ ಜ್ಯೂಸ್ ಮಾರುವವರು ಅದರಲ್ಲಿ ಸಕ್ಕರೆಯನ್ನು ಕೂಡ ಮಿಶ್ರಣ ಮಾಡುತ್ತಾರೆ. ಇದು ಇನ್ನಷ್ಟು ಹಾನಿಕಾರಕವಾಗುತ್ತದೆ. ಹಣ್ಣುಗಳನ್ನು ತಿನ್ನುವ ಬದಲು ರಸವನ್ನು ಮಾತ್ರ ಕುಡಿಯುವುದರಿಂದ ಮಲಬದ್ಧತೆ, ಜೀರ್ಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಎಸಿಡಿಟಿ, ಗ್ಯಾಸ್, ಮಧುಮೇಹ, ರಕ್ತದ ಅಧಿಕ ಒತ್ತಡ, ಹೃದಯ ರೋಗ, ಇತ್ಯಾದಿಗಳು ವೃದ್ಧಿಯಾಗಲು ಅನುಕೂಲವಾಗುತ್ತದೆ.
ಎರಡನೆಯದಾಗಿ, ಅನೇಕ ಪ್ರಕಾರದ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಿದಾಗ ಅದರಲ್ಲಿನ ಘಟಕಗಳು ಸಂಪೂರ್ಣ ಲಾಭ ನೀಡುವಲ್ಲಿ ವಿಫಲವಾಗುತ್ತವೆ. ಅವುಗಳ ಪೌಷ್ಟಿಕತೆ ಕುಗ್ಗುತ್ತದೆ. ಆದ್ದರಿಂದಲೇ, “ಮಲ್ಟಿ ಗ್ರೇನ್” ಸಂಕಲ್ಪನೆ ಕೂಡ ಒಳ್ಳೆಯದಲ್ಲ.
ಹಣ್ಣುಗಳನ್ನು ಹೇಗೆ ಸೇವಿಸಬೇಕು?
– ಬಣ್ಣ ಹಾಗೂ ಗಾತ್ರಗಳಿಗೆ ಅಥವಾ ವಿದೇಶಿ ಹೆಣ್ಣುಗಳಿಗೆ ಮರುಳಾಗದೆ ನಾಟಿ ತಳಿಯ ಶುದ್ಧ ಸಾವಯವ ಹಣ್ಣುಗಳನ್ನು ಖರೀದಿಸಲು ಪ್ರಯತ್ನಿಸಿ.
– ಹಣ್ಣುಗಳನ್ನು ಅರ್ಧ ಗಂಟೆ ಉಪ್ಪು ನೀರಿನಲ್ಲಿ ಮತ್ತು ಅರ್ಧ ಗಂಟೆ ಅಡುಗೆ ಸೋಡಾ ನೀರಿನಲ್ಲಿ ನೆನೆಸಿಟ್ಟು ಚೆನ್ನಾಗಿ ತೊಳೆದು ನಂತರ ಬಳಸಿ.
– ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಮತ್ತು ನಂತರ ಸುಮಾರು ಒಂದುವರೆಯಿಂದ ಎರಡು ಗಂಟೆ ಕಾಲ ಏನನ್ನೂ ತಿನ್ನಬಾರದು.
– ಎಂದಿಗೂ ಹಣ್ಣಿನ ರಸವನ್ನು ತಯಾರಿಸಿ ಕುಡಿಯಬೇಡಿ. ಸಂಪೂರ್ಣ ಹಣ್ಣಿನ ತಿರುಳು ಭಾಗವನ್ನು ಸೇವಿಸಿ.
– ಒಂದು ಬಾರಿಗೆ ಕೇವಲ ಒಂದು ಅಥವಾ ಎರಡು ಪ್ರಕಾರದ ಹಣ್ಣುಗಳನ್ನು ಮಾತ್ರ ಸೇವಿಸಿ ಅನೇಕ ಪ್ರಕಾರದ ಹಣ್ಣುಗಳನ್ನು ಅಥವಾ ಫ್ರೂಟ್ ಸಾಲಡನ್ನು ಸೇವಿಸಬೇಡಿ.
– ಹಣ್ಣುಗಳನ್ನು ಸೇವಿಸುವಾಗ ಉಪ್ಪು, ಸಕ್ಕರೆ, ಬೆಲ್ಲ, ಮಸಾಲೆ, ಹಾಲು, ಇತ್ಯಾದಿ ಇತರ ಯಾವುದೇ ಪದಾರ್ಥಗಳನ್ನು ಬಳಸಬೇಡಿ.
– ಹಣ್ಣುಗಳನ್ನು ಅತಿಯಾಗಿ ಅಲ್ಲದೆ ಮಿತವಾಗಿ ಸೇವಿಸಿ. ಕೆಜಿಗಳಲ್ಲಿ ನಿಮ್ಮ ತೂಕದ 5 ಪಟ್ಟು ಹಣ್ಣುಗಳನ್ನು ಗ್ರಾಂಗಳಲ್ಲಿ ಪ್ರತಿದಿನ ಸೇವಿಸಬಹುದು. ಉದಾಹರಣೆಗೆ, 60 ಕೆಜಿ ತೂಕದ ವ್ಯಕ್ತಿಯು 300 ಗ್ರಾಂ ಹಣ್ಣುಗಳನ್ನು ಒಂದು ದಿನದಲ್ಲಿ ಸೇವಿಸಬಹುದು.
ಡಾ. ಪ್ರ. ಅ. ಕುಲಕರ್ಣಿ
Comments are closed.