Kodagu: ಅರಣ್ಯ ಇಲಾಖೆಯ ಜೀಪ್ ಚಾಲಕನ ಸಂಶಯಾಸ್ಪದ ಸಾವು ಪ್ರಕರಣ: ಐವರ ವಿರುದ್ದ F. I. R. ದಾಖಲು!

Kodagu: ಕಳ್ಳಹಳ್ಳ ಅರಣ್ಯ ವಿಭಾಗದಲ್ಲಿ ಕಳೆದ 25 ವರ್ಷಗಳಿಂದ ಅರಣ್ಯ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋಪಾಲ ಎಂಬುವರು ಮೇ 22 ರಂದು ಕರ್ತವ್ಯ ನಿಮಿತ್ತ ಇತರ ಸಿಬ್ಬಂದಿಗಳೊಂದಿಗೆ ತೆರಳುತ್ತಿದ್ದಾಗ ಇವರಿದ್ದ ಜೀಪ್ ಕಾಡಿನೊಳಗೆ ಅಪಘಾತಕ್ಕೀಡಾಗಿತ್ತು. ಗಾಯಗೊಂಡಿದ್ದ ಇವರನ್ನು ಇತರ ಸಿಬ್ಬಂದಿಗಳು ರಾತ್ರಿ ಮೈಸೂರು ಆಸ್ಪತ್ರೆಗೆ ಸೇರಿಸಿದ್ದರು. ತಲೆಯ ಬಾಗಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿದ್ದರಿಂದ 72 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸದೇ ಮೇ 23ರ ಬೆಳಗಿನ ಜಾವ ನಾಗಪುರ ಹಾಡಿಯಲ್ಲಿರುವ ಮನೆಗೆ ಅರಣ್ಯ ಇಲಾಖೆಯ ಇತರೆ ಸಿಬ್ಬಂದಿಗಳು ಅವರನ್ನು ಬಿಟ್ಟು ಹೋಗಿದ್ದಾರೆ. ನಂತರ ಅವರ ಪತ್ನಿ ಪುನಃ ಮೇ 26ರಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 12 ರಂದು ಗೋಪಾಲರವರು ಮನೆಯಲ್ಲಿ ಮೃತಪಟ್ಟಿದ್ದಾರೆ.

ಇಲಾಖೆಯ ನಿಯಮದಂತೆ ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸದೆ ಇಲಾಖಾ ಅಧಿಕಾರಿಗಳು ಗೋಪಾಲರವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಿಯಮದಂತೆ ಮೇ 22ರಂದು ಅಪಘಾತವಾಗಿದ್ದರೂ ಕೂಡ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಇಲಾಖೆಯಿಂದ ದೂರು ನೀಡಲಿಲ್ಲ ಅಲ್ಲದೇ ಘಟನೆ ನಡೆದ ನಂತರ ಅವರ ಪತ್ನಿ ಹಾಗೂ ಮಕ್ಕಳಿಗೆ ತಿಳಿಸಿರಲಿಲ್ಲ. ಇಲಾಖೆಯಿಂದಲೂ ಇವರಿಗೆ ಸೂಕ್ತ ಚಿಕಿತ್ಸೆ ದೊರಕದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅವರ ಪತ್ನಿ ಚಿತ್ರಾ ಅವರು ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ನೆನ್ನೆ ಪ್ರಕರಣ ದಾಖಲಾಗಿದೆ.
ಇದೀಗ ಮೃತ ಜೀಪ್ ಚಾಲಕನ ಪತ್ನಿ ನೀಡಿದ ದೂರಿನ ಅನ್ವಯ ನಿರ್ಲಕ್ಷ್ಯ, ಕರ್ತವ್ಯ ಲೋಪ ಹಾಗೂ ಸಂಶಯದ ಹಿನ್ನೆಲೆಯಲ್ಲಿ ಕಳ್ಳಳ್ಳ ಅರಣ್ಯ ವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿ ರಾಜಶೇಖರ್, ಡಿ.ಆರ್. ಎಫ್. ವೇಣುಗೋಪಾಲ್, ಅರಣ್ಯ ಸಿಬ್ಬಂದಿಗಳಾದ ಶಿವು, ಅಭಿ ಹಾಗೂ ಗುತ್ತಿಗೆದಾರ ಪ್ರಕಾಶ್ ಎಂಬುವರ ವಿರುದ್ಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 105, 211, 213, ಅನ್ವಯ ಎಫ್.ಐ.ಆರ್. ದಾಖಲಾಗಿದೆ. ಈ ಸಂಬಂಧ ಕುಟ್ಟ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Comments are closed.