ಪತಿಯ ಕೊಲೆ, ಪೊಲೀಸ್ ನಿರ್ಲಕ್ಷ್ಯ: ಸ್ವತಃ ತನಿಖೆಗೆ ಇಳಿದು ಕೊಲೆಗಾರನನ್ನು ಹಿಡಿದು ಹಾಕಿದ ಪತ್ನಿ

ಬೆಂಗಳೂರು: ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿ ಒಬ್ಬನ ಕೊಲೆ ನಡೆದಿತ್ತು. ಆದರೆ ಆರೋಪಿಯ ಪತ್ತೆ ಆಗಿರಲಿಲ್ಲ. ಪೋಲೀಸರು ಕೂಡಾ ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ಆದರೆ ಗಂಡನ ಹತ್ಯೆ ಪ್ರಕರಣವನ್ನು ಸ್ವತಃ ತನಿಖೆಗೆ ಇಳಿದು ಪತ್ತೆ ಹಚ್ಚಿದ್ದು ಪೊಲೀಸರೇ ಅಚ್ಚರಿ ಆಗುವಂತೆ ಮಾಡಿದೆ. ದೀಪಕ್ ಎಂಬ ನೇಪಾಳ ಮೂಲದ ಯುವಕನ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮೊದಲು ನಿರ್ಲಕ್ಷ್ಯ ತೋರಿದ್ದರು. ಆತನ ಪತ್ನಿ ಸುಷ್ಮಾ ನಿರಂತರ ಪರಿಶ್ರಮದ ಫಲವಾಗಿ ಕೊನೆಗೂ ಕೊಲೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ.

ಮೇ 1ರಂದು ವರ್ತೂರಿನಲ್ಲಿ ಮೋರಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತ ದೇಹ ಒಂದು ಪತ್ತೆಯಾಗಿತ್ತು. ದೇಹದ ಗುರುತನ್ನು ಸುಷ್ಮಾ ಎಂಬವರು ದೃಢಪಡಿಸಿ ಅದು ತನ್ನ ಗಂಡನ ಶವ ಎಂದು ಖಾತರಿಪಡಿಸಿದ್ದಳು. ಆತನ ಎದೆ ಭಾಗದಲ್ಲಿ ಗಾಯವಿದ್ದ ಕಾರಣದಿಂದ ಇದು ಸಹಜ ಸಾವಲ್ಲ ಕೊಲೆ ಎಂದು ಆತನ ಪತ್ನಿ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಪೊಲೀಸರು ಯುಡಿಆರ್ (ಅಸಹಜ ಮರಣ ವರದಿ) ಎಂದು ಪ್ರಕರಣ ದಾಖಲಿಸಿ, ತನಿಖೆಗೆ ಮುಂದಾಗಿರಲಿಲ್ಲ.
ಆತನ ಪತ್ನಿ ಸುಷ್ಮಾ ಮಾತ್ರ, ಈ ಅಪರಿಚಿತ ಊರಿನಲ್ಲಿ ನನ್ನಿಂದ ಏನಾದೀತು ಎಂದು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಗಂಡನ ಸಾವಿನ ಬಗ್ಗೆ ಕೊಲೆಯ ಶಂಕೆಯನ್ನು ನಿಲ್ಲಿಸದೆ, ಯಾರು ಮಾಡಿರಬಹುದು ಎಂಬುದನ್ನು ಪತ್ತೆ ಮಾಡಲು ತಾನೇ ತನಿಖೆಗೆ ಇಳಿದಿದ್ದಾರೆ.
ಈ ವೇಳೆ, ಜೂನ್ 5ರಂದು ಸಂಬಂಧಿ ಕರುಣ್ ಸಿಂಗ್’ರಿಗೆ ಆರೋಪಿ ಇಂದ್ರ ಬಿಸ್ಪಾ ತಾನೇ ಕೊಲೆ ಮಾಡಿದ್ದೇನೆ ಎಂದು ದೂರವಾಣಿ ಮೂಲಕ ಒಪ್ಪಿಕೊಂಡಿದ್ದಾನೆ ಅನ್ನುವ ಸುದ್ದಿಯನ್ನು ಪತ್ನಿ ಕಲೆಕ್ಟ್ ಮಾಡಿದ್ದಾಳೆ. ತಕ್ಷಣ ಸುಷ್ಮಾ ವರ್ತೂರು ಪೊಲೀಸರಿಗೆ ದೂರನ್ನು ಸಲ್ಲಿಸಿದ್ದಾರೆ.
ಪತ್ನಿಯ ಹುಡುಕಾಟ ಮತ್ತು ಪರಿಶ್ರಮದ ಫಲವಾಗಿ, ಆರೋಪಿ ಇಂದ್ರ ಬಿಸ್ಪಾನನ್ನು ಪೊಲೀಸರು ಬಂಧಿಸಿ, ಕೊಲೆ ಪ್ರಕರಣದ ತನಿಖೆಗೆ ಚುರುಕು ನೀಡಿದ್ದಾರೆ. ಮಾಹಿತಿ ಪ್ರಕಾರ, ಏಪ್ರಿಲ್ 11ರಂದು ಮೃತ ದೀಪಕ್ ಮತ್ತು ಪತ್ನಿ ಸುಷ್ಮಾ ನಡುವೆ ಜಗಳ ಆಗಿತ್ತು. ಇಬ್ಬರ ಜಗಳ ಬಿಡಿಸಲು ಬಂದ ಸಂಬಂಧಿ ಇಂದ್ರ ಬಿಸ್ಪಾಗೆ, ದೀಪಕ್ ಹೊಡೆದಿದ್ದ. ಈ ಕೋಪವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆತನು ದೀಪಕ್ನನ್ನು ಕೊಂದು ಮೋರಿಯಲ್ಲಿ ಎಸೆದಿದ್ದನು ಎಂಬ ಮಾಹಿತಿ ಲಭಿಸಿದೆ. ಓರ್ವ ಮಹಿಳೆಯ ಧೈರ್ಯದಿಂದ ಕೊಲೆಯ ಸತ್ಯಾಂಶ ಬಹಿರಂಗ ಆಗಿ, ಆರೋಪಿಯ ಬಂಧನವಾಗಿರುವುದು ಪೊಲೀಸ್ ನಿರ್ಲಕ್ಷ್ಯದ ವಿರುದ್ಧ ಒಬ್ಬ ಪತ್ನಿಯ ಗೆಲುವು ಎಂದು ಹೇಳಲಾಗುತ್ತಿದೆ.
Comments are closed.