ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿಲ್ಲ ಕಂದಾಯ ಪೋಡಿ- ಹೋಟೆಲ್ ಗಳಲ್ಲಿ ಮಾತ್ರ ಸಿಗತ್ತೆ ಬಿಸಿಬಿಸಿ ಪೋಡಿ!!
ಬೆಳ್ತಂಗಡಿಯಲ್ಲಿ ಅಕ್ರಮ ಸಕ್ರಮ ಸಿಟ್ಟಿಂಗ್ ಗೆ ಫಿಟ್ಟಿಂಗ್ ಇಡುವವರಾರು!?

Mangaluru: ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಕನಸಿನ ಕೂಸಾಗಿರುವ ಪೋಡಿ ಮುಕ್ತ ಗ್ರಾಮ ಯೋಜನೆಗೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಮಾತ್ರ ಈವರೆಗೆ ಯಾವುದೇ ಸ್ಪಂದನೆ ದೊರಕದ ಕಾರಣ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿಲ್ಲ ಕಂದಾಯ ಪೋಡಿ! ಹೋಟೆಲ್ ಗಳಲ್ಲಿ ಮಾತ್ರ ಕಾಣಬೇಕಷ್ಟೆ ಬಿಸಿ ಬಿಸಿ ಪೋಡಿ!! ಎಂಬಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೇ ರೀತಿ ಬೆಳ್ತಂಗಡಿ ತಾಲೂಕಿನಲ್ಲಿ 2018 ನೇ ಇಸವಿಯಲ್ಲಿ ಅರ್ಜಿ ಸಲ್ಲಿಸಿದ್ದ ಸುಮಾರು 70 ಸಾವಿರಕ್ಕೂ ಮಿಕ್ಕಿದ ಅಕ್ರಮ ಸಕ್ರಮ ಅರ್ಜಿದಾರರ ಕಡತಗಳು ಈ ವರೆಗೂ ವಿಲೇವಾರಿಯಾಗದೆ ತಾಲೂಕು ಕಚೇರಿಯ ಓಬಿರಾಯನ ಕಾಲದ ಕಪಾಟುಗಳ ಮೂಲೆಗಳಲ್ಲಿ ಭದ್ರವಾಗಿ ಧೂಳು ಹಿಡಿದುಕೊಂಡು ಕೊಳೆಯುತ್ತಿವೆ.ಅಕ್ರಮ ಸಕ್ರಮ ಕಡತ ವಿಲೇವಾರಿಗೆ ಹಿಂದೆಯೇ ಎರಡು ಪಕ್ಷಗಳ ಮಿಶ್ರತಳಿ ಸಿಟ್ಟಿಂಗ್ ಕಮಿಟಿ ರಚನೆಯಾಗಿದ್ದರೂ ಸಹ ಕಾಂಗ್ರೆಸ್ ಮತ್ತು ಬಿಜೆಪಿ ಜಟಾಪಟಿಯಿಂದಾಗಿ ಈವರೆಗೂ ಅಕ್ರಮ ಸಕ್ರಮ ಕಮಿಟಿಯ ಸಿಟ್ಟಿಂಗ್ ಗೆ ತಿಥಿ, ವಾರ, ನಕ್ಷತ್ರಗಳ, ಮಹೂರ್ತಗಳು ಕೈಗೂಡಿ ಬಂದಿಲ್ಲ.ಇದರ ಜೊತೆಯಲ್ಲೇ ಬಹುತೇಕರು ತೆರೆಮರೆಯಲ್ಲಿ ಸಿಟ್ಟಿಂಗ್ ಗೆ ಫಿಟ್ಟಿಂಗ್ ಇಟ್ಟು ಸೆಟ್ಟಿಂಗ್ ಮಾಡುತ್ತಿರುವುದರಿಂದ ಅರ್ಜಿ ನೀಡಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಅದೆಷ್ಟೋ ಮಂದಿಯ ಸಿಟ್ಟು ಇದೀಗ ನೆತ್ತಿಗೇರತೊಡಗಿದೆ. ಈ ಮಧ್ಯೆ ತಾಲೂಕು ಕಚೇರಿ ಒಳಗಿಂದ ಅದೆಷ್ಟೋ ಅಕ್ರಮ ಸಕ್ರಮಗಳ ಕಡತಗಳು ನಿಗೂಢವಾಗಿ ನಾಪತ್ತೆಯಾಗಿವೆಯೆಂಬ ಮಾಹಿತಿಗಳು ಕೂಡಾ ಕೇಳಿ ಬರುತ್ತಿವೆ.
ಬೆಳ್ತಂಗಡಿ ತಾಲೂಕು ಕಚೇರಿ ಮತ್ತು ಜನಪ್ರತಿನಿಧಿಗಳಿಂದ ಜನಸಾಮಾನ್ಯರಿಗಾಗುತ್ತಿರುವ ಈ ರೀತಿಯ ಮೋಸ, ವಂಚನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸೋಮವಾರ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅವರು ಮಾತನಾಡುತ್ತಾ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ವಿಲೇವಾರಿ ಆಗದೆ ಬಾಕಿ ಉಳಿದ ಎಲ್ಲ ಕಡತಗಳನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಬೆಳ್ತಂಗಡಿ ತಹಶಿಲ್ದಾರರು ಜೂನ್ 17ರ ಒಳಗೆ ಹೋರಾಟ ಸಮಿತಿಗೆ ಲಿಖಿತವಾಗಿ ಉತ್ತರ ನೀಡಬೇಕೆಂದರಲ್ಲದೆ ಬೇರೆ ಬೇರೆ ತಾಲೂಕುಗಳಲ್ಲಿ ಅಕ್ರಮ ಸಮಿತಿಗಳು ಹಲವು ಸುತ್ತಿನ ಬೈಠಕ್ ಗಳನ್ನು ನಡೆಸಿ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಿದ್ದರೂ ಸಹಾ ಬೆಳ್ತಂಗಡಿಯಲ್ಲಿ ಮಾತ್ರ ಇದಕ್ಕೆ ಇನ್ನೂ ಕೂಡ ಕಾಲ ಕೂಡಿ ಬಂದಿಲ್ಲ. ಅದೇ ರೀತಿ ಅಧಿಕಾರಿಗಳು ಬಹುಮಂಜುರಾತಿಗಾಗಿ ಸರ್ವೆ ನಡೆಸಲು ಆಪ್ ಒಂದನ್ನು ರಚಿಸಿಕೊಂಡಿದ್ದು ಈ ಆಪ್ ನ ಪ್ರಕಾರ ಹಿಂದೆ ಅರ್ಜಿ ನೀಡುವಾಗ ಅಧಿಕಾರಿಗಳ ತಪ್ಪಿನಿಂದಾಗಿ ತಪ್ಪಾಗಿ ನಮೂದಿಸಿಕೊಂಡ ಸರ್ವೆ ನಂಬರ್ ಗಳು ಈ ಅಧಿಕಾರಿಗಳು ರಚಿಸಿಕೊಂಡ ಆಪ್ ಗೆ ಹೊಂದಿಕೊಳ್ಳದೆ ಇರುವ ಕಾರಣದಿಂದಾಗಿ ಆದೆ ಷ್ಟೋ ಅರ್ಜಿಗಳು ವಜಾ ಗೊಂಡಿವೆ.
ಹೀಗಾಗಿ ಕೂಡಲೇ ಆಪ್ ನಿರ್ದೇಶಿತ ಭೂಮಾಪನಾ ಅಳತೆ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಅವರು ಸಲಹೆ ನೀಡಿದರು. ಅಲ್ಲದೆ ಭೂ ಮಂಜೂರಾತಿ ವೇಳೆ1.1. 1984ರ ಹಿಂದೆ ಹುಟ್ಟಿದವರಿಗೆ ಮಾತ್ರವೇ ಭೂಮಂಜೂರಾತಿ ನೀಡುವ ಹೊಸ ಕಾನೂನು ಕೂಡಾ ಜಾರಿಯಲ್ಲಿರುವುದರಿಂದ ಈ ಕಾನೂನು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಹಾಗೆಯೇ 94 ಸಿ ಅರ್ಜಿಗಳು ಇನ್ನೂ ಕೂಡ ವಿಲೇ ಆಗದೇ ಇರುವ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ 94 ಸಿಯ ಅರ್ಜಿಗಳೇ ತಾಲೂಕು ಕಚೇರಿಯಲ್ಲಿಲ್ಲ ಎನ್ನುವ ಬೇಜವಾಬ್ದಾರಿಯುತ ಕಾರಣಗಳನ್ನು ಅವರು ನೀಡುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆಯೂ ಸೂಕ್ತ ತನಿಖೆ ಆಗಬೇಕೆಂದು ಅವರು ಒತ್ತಾಯಿಸಿದರು. ಅಲ್ಲದೆ ಪ್ರತಿ ಗ್ರಾಮಗಳಲ್ಲೂ ಪೋಡಿ ಮುಕ್ತ ಗ್ರಾಮವನ್ನಾಗಿಸಬೇಕೆಂಬ ಕಡ್ಡಾಯ ಆದೇಶವಿದ್ದರೂ ಸಹ ಬೆಳ್ತಂಗಡಿಯ ಕಚೇರಿಯಲ್ಲಿನ ಪೋಡಿಯನ್ನು ತಹಶೀಲ್ದಾರರು ಮತ್ತು ಸಿಬ್ಬಂದಿಗಳೇ ತಿನ್ನುತ್ತಿದ್ದಾರೇನೋ ಎಂಬ ಸಂಶಯ ಮೂಡುತ್ತಿದೆ ಎಂದವರು ಛೇಡಿಸಿದರಲ್ಲದೆ ಪ್ಲಾಟಿಂಗ್ ಸಮಸ್ಯೆಯಿಂದಾಗಿ ಅದೆಷ್ಟೋ ಮಂದಿಗೆ ವಿಭಾಗ ಪತ್ರ ಮಾಡಿಕೊಳ್ಳಲೂ ಆಗದೆ ಇತ್ತ ಮನೆಯನ್ನೂ ಕಟ್ಟಿಕೊಳ್ಳಲಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಹೀಗಾಗಿ ಬೆಳ್ತಂಗಡಿ ತಾಲೂಕು ಕಚೇರಿಯಿಂದಾಗುತ್ತಿರುವ ಮೋಸ,ವಂಚನೆ,ಭ್ರಷ್ಟಾಚಾರ ಆಮೆ ನಡಿಗೆಯ ಕೆಲಸ ಕಾರ್ಯಗಳನ್ನು ವಿರೋಧಿಸಿ ಇದೇ ಬರುವ ಜೂನ್ 26ರಂದು ಬೆಳ್ತಂಗಡಿಯ ಅಸಂಘಟಿತ ಕೃಷಿ,ಕೂಲಿ, ಕಾರ್ಮಿಕರು ಸ್ವಯಂ ಪ್ರೇರಿತವಾಗಿ ನಡೆಸುವ ಬೃಹತ್ ಹಕ್ಕುತಾಯ ಸಮಾವೇಶ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡರಿಗೆಜೂನ್ 17 ರಿಂದ ನಡೆಸುವ ಪತ್ರ ಚಳವಳಿಗೂ ಕೂಡ ತಾಲೂಕಿನ ಕೃಷಿ, ಕೂಲಿ, ಕಾರ್ಮಿಕ ಜನಸಾಮಾನ್ಯರೆಲ್ಲರೂ ಬೆಂಬಲಿಸಬೇಕೆಂದು ಅವರು ಮನವಿ ಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಜಗನ್ನಾಥ ಗೌಡ, ಆನಂದ ಗೌಡ, ಬಾಲಕೃಷ್ಣ ಕೊಕ್ಕಡ, ಬಾಲಕೃಷ್ಣ ಬಂದಾರು ಮುಂತಾದವರು ಉಪಸ್ಥಿತರಿದ್ದರು.
Comments are closed.