Kamal Haasan: ನನ್ನ ಪರವಾಗಿ ನಿಂತ ತಮಿಳುನಾಡು ಜನರಿಗೆ ಧನ್ಯವಾದ: ಶೀಘ್ರವೇ ಪತ್ರಿಕಾಗೋಷ್ಠಿ- ಕಮಲ್‌ ಹಾಸನ್‌

Share the Article

Kamal Haasan: ನಟ ಕಮಲ್‌ಹಾಸನ್‌ ಅವರು ಇದೀಗ ಕನ್ನಡ ಭಾಷೆಯ ಕುರಿತು ನೀಡಿದ ಹೇಳಿಕೆಯ ಕುರಿತು ಹೇಳಿದ್ದು, ತಮ್ಮ ಹೇಳಿಕೆಯನ್ನು ಸಂದರ್ಭದಿಂದ ಹೊರತೆಗೆದು ತಿರುಚಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ಪತ್ರಿಕಾಗೋಷ್ಠಿ ಮಾಡುವುದಾಗಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವುದಾಗಿ ಹೇಳಿದ್ದಾರೆ.

ಕನ್ನಡ ಭಾಷೆಯ ವಿವಾದ ಹೆಚ್ಚಾಗುತ್ತಿದ್ದಂತೆ, ಕಮಲ್‌ ಹಾಸನ್‌ ತಮ್ಮ ತಮಿಳು ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಬೆಂಬಲಕ್ಕೆ ನಿಂತ ತಮಿಳುನಾಡಿನ ಜನತೆಗೆ ಧನ್ಯವಾದ ಅರ್ಪಿಸಿರುವ ಅವರು ಈ ವಿವಾದದ ಕುರಿತು ಹೇಳಿದ್ದಾರೆ.

“ನನ್ನ ಹೇಳಿಕೆಯ ಒಂದು ಸಣ್ಣ ತುಣುಕನ್ನು ಮಾತ್ರ ಬಳಸಿ, ಅದರ ಪೂರ್ಣ ಅರ್ಥವನ್ನು ಮರೆಮಾಚಿ ವಿವಾದ ಸೃಷ್ಟಿಸಲಾಗಿದೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಪೂರ್ಣ ವೀಡಿಯೋವನ್ನು ನೋಡಿದರೆ, ನಾನು ಯಾವ ಸಂದರ್ಭದಲ್ಲಿ ಮತ್ತು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೆ ಎಂಬುದು ಸ್ಪಷ್ಟವಾಗುತ್ತದೆ, ನಾನು ಯಾವಾಗಲೂ ಕನ್ನಡ ಭಾಷೆಯನ್ನು ಮತ್ತು ಕರ್ನಾಟಕದ ಜನರನ್ನು ಗೌರವಿಸುತ್ತಾ ಬಂದಿದ್ದೇನೆ. ಕನ್ನಡ ಚಿತ್ರರಂಗದ ದಂತಕಥೆ ಡಾ. ರಾಜ್‌ಕುಮಾರ್ ಅವರಂತಹ ಮಹಾನ್ ಕಲಾವಿದರೊಂದಿಗೆ ಒಡನಾಟ ಹೊಂದಿರುವ ನಾನು, ಕನ್ನಡದ ಬಗ್ಗೆ ಅಗೌರವ ತೋರುವ ಮಾತನ್ನು ಎಂದಿಗೂ ಆಡುವುದಿಲ್ಲ. ನನ್ನ ಮತ್ತು ಕರ್ನಾಟಕದ ನಡುವಿನ ಬಾಂಧವ್ಯ ಬಹಳ ಹಳೆಯದು” ಎಂದು ಕಮಲ್ ಹಾಸನ್ ಉಲ್ಲೇಖ ಮಾಡಿದ್ದಾರೆ.

ಈ ಎಲ್ಲಾ ಗೊಂದಲವನ್ನು ನಿವಾರಣೆ ಮಾಡಲು ಶೀಘ್ರದಲ್ಲೇ ಪತ್ರಿಕಾಗೋಷ್ಠಿ ಆಯೋಜನೆ ಮಾಡುವುದಾಗಿ ಹೇಳಿದ್ದಾರೆ. ಆಗ ಸತ್ಯ ಎಲ್ಲರಿಗೂ ತಿಳಿಯಲಿದೆ ಎಂದು ಹೇಳಿದ್ದಾರೆ.

Comments are closed.