Mangaluru: ಪ್ರಚೋದನಕಾರಿ ಪೋಸ್ಟ್ ವಿರುದ್ಧ ಪೊಲೀಸರ ತೀವ್ರ ಕಾರ್ಯಾಚರಣೆ: 5 ಯುವಕರ ಬಂಧನ

Share the Article

Mangaluru: ಸಾಮಾಜಿಕ ಮಾಧ್ಯಮಗಳ ಮೂಲಕ ಕೋಮು ದ್ವೇಷ ಹರಡುವುದರ ವಿರುದ್ಧದ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಮಾಜಿಕ ಸಾಮರಸ್ಯವನ್ನು ಕದಡುವ ಗುರಿಯನ್ನು ಹೊಂದಿರುವ ಪ್ರಚೋದನಕಾರಿ ಪೋಸ್ಟ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ಐವರನ್ನು ಬಂಧಿಸಿದ್ದಾರೆ.

ಮೊದಲ ಪ್ರಕರಣದಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಅವರ ಪುತ್ರ 23 ವರ್ಷದ ಮೊಹಮ್ಮದ್ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಪ್ರಚೋದನಕಾರಿ ವಿಷಯವನ್ನು ಹರಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ಎರಡನೇ ಪ್ರಕರಣದಲ್ಲಿ ಸುರತ್ಕಲ್ ನಿವಾಸಿ ನಾಗರಾಜು ಬಂಗೇರ ಅವರ ಪುತ್ರ ಚೇತನ್ (20) ಮತ್ತು ಹಳೆಯಂಗಡಿ ಪೋಸ್ಟ್ ನಿವಾಸಿ ಯೋಗೀಶ್‌ ಅಡಪ ಅವರ ಪುತ್ರ ನಿತಿನ್ ಅಡಪ (23) ಎಂಬ ಇಬ್ಬರು ಯುವಕರು ಮುಸ್ಲಿಂ ಹೆಸರಿನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್ ಬಳಸಿ team_karna_surathkal ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿದ್ದರು. ಚೆನ್ನಪ್ಪ ಅಲಿಯಾಸ್ ಮುತ್ತು ಸುರತ್ಕಲ್ ಎಂಬ ಬಳಕೆದಾರರ ಮೂಲಕ ಪ್ರಚೋದನಕಾರಿ ವಿಷಯವನ್ನು ಪೋಸ್ಟ್ ಮಾಡಲು ಈ ಖಾತೆಯನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಈ ಇಬ್ಬರನ್ನು ಬಂಧಿಸಲಾಗಿದ.

ಮೂರನೇ ಘಟನೆಯಲ್ಲಿ ಇಬ್ರಾಹಿಂ ಅವರ ಪುತ್ರ ಮತ್ತು ಮಂಗಳೂರಿನ ಫರಂಗಿಪೇಟೆ ನಿವಾಸಿ ರಿಯಾಜ್ ಇಬ್ರಾಹಿಂ (30) ಎಂಬಾತನನ್ನು ಸೌದಿ ಅರೇಬಿಯಾದ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ಬ್ಯಾರಿ ರಾಯಲ್‌ ನವಾಬ್ ಮೂಲಕ ಕೋಮು ಸಂದೇಶಗಳನ್ನು ಹರಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಆತನ ವಿರುದ್ಧ ಬರ್ಕೆಮತ್ತು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ನಾಲ್ಕನೇ ಪ್ರಕರಣವು ಮಂಗಳೂರಿನ ಕೂಳೂರು ಪೋಸ್ಟ್‌ನಲ್ಲಿ ವಾಸಿಸುವ ದಿವಂಗತ ಮೊಹಮ್ಮದ್ ಮುಸ್ತಫಾ ಅವರ ಪುತ್ರ ಜಮಾಲ್‌ ಜಕೀ‌ರ್ (21)ಗೆ ಸಂಬಂಧಿಸಿದೆ. ಆತ Troll_bengare_ro_makka ಇನ್‌ಸ್ಟಾಗ್ರಾಮ್ ಪೇಜ್ ಮೂಲಕ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಆತ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಐದನೇ ಪ್ರಕರಣದಲ್ಲಿ ಮಂಗಳೂರು ನಗರದ ಹಳೆಯಂಗಡಿಯ ಕೊಲವೈಲ್ ನಿವಾಸಿ ಗುರುಪ್ರಸಾದ್ ಎಂಬಾತ ಗುರು ಪ್ರಸಾದ್ ಹಳೆಯಂಗಡಿ ಎಂಬ ಖಾತೆಯನ್ನು ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಬಂಧಿಸಲಾಯಿತು. ಎಲ್ಲ ಐದು ಪ್ರಕರಣಗಳನ್ನು ಮಂಗಳೂರಿನ ಸಿಇಎನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ರಚಿಸಲಾದ ವಿಶೇಷ ತಂಡಗಳು ತನಿಖೆ ನಡೆಸುತ್ತಿವೆ.

Comments are closed.