Karnataka: ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

Share the Article

Karnataka: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಸೇವಾ ಸಿಂಧು ತಂತ್ರಾಂಶದ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ:

ಹಿಂದುಳಿದ ವರ್ಗಕ್ಕೆ ಸೇರಿದ ನಿರುದ್ಯೋಗಿಗಳು ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ.2 ಲಕ್ಷಗಳವರೆಗೆ ಆರ್ಥಿಕ ನೆರವು, ರೂ.1 ಲಕ್ಷಗಳವರೆಗಿನ ಸಾಲದಲ್ಲಿ ಶೇ.20ರಷ್ಟು ಗರಿಷ್ಠ ರೂ. 20 ಸಾವಿರಗಳ ಸಹಾಯಧನ ಹಾಗೂ ರೂ.1 ಲಕ್ಷದಿಂದ ರೂ.2 ಲಕ್ಷದವರೆಗೆ ಶೇ.15 ರಷ್ಟು ಕನಿಷ್ಠ ರೂ.20 ಸಾವಿರಗಳಿಂದ ಗರಿಷ್ಠ ರೂ.30 ಸಾವಿರ ಸಹಾಯಧನ(ಸಬ್ಸಿಡಿ) ಉಳಿಕೆ ಮೊತ್ತ ಶೇ.4 ರ ಬಡ್ಡಿದರದಲ್ಲಿ ನಿಗಮದಿಂದ ನೇರವಾಗಿ ಸಾಲ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98 ಸಾವಿರಗಳು ಪಟ್ಟಣ ಪ್ರದೇಶದವರಿಗೆ ರೂ.1.20 ಲಕ್ಷ ಒಳಗಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.

ಗಂಗಾ ಕಲ್ಯಾಣ ನೀರಾವರಿ ಯೋಜನೆ:

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ರೂ.4.25 ಲಕ್ಷ ಹಾಗೂ ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50 ಸಾವಿರಗಳ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದು. ಇನ್ನುಳಿದ ಜಿಲ್ಲೆಗಳಿಗೆ ರೂ.3.25 ಲಕ್ಷಗಳು ಹಾಗೂ ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50 ಸಾವಿರಗಳ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದು. ಈ ಯೋಜನೆಯಲ್ಲಿ ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ 98 ಸಾವಿರ ಮತ್ತು ಪಟ್ಟಣ ಪ್ರದೇಶದವರಿಗೆ 1,20,000 ರೂ.ಗಳ ಮಿತಿಯೊಳಗಿರಬೇಕು.

ಅರಿವು-ಶೈಕ್ಷಣಿಕ ಸಾಲ ಯೋಜನೆ:

ಈ ಯೋಜನೆಯಡಿ ಸಿಇಟಿ ಮತ್ತು ನೀಟ್ ಇತ್ಯಾದಿ ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಾದ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ ಗಳ ವ್ಯಾಸಂಗಕ್ಕೆ ವಾರ್ಷಿಕ 1 ಲಕ್ಷ ರೂ.ಗಳಂತೆ ಕೋರ್ಸ್ ನ ಅವಧಿಗೆ ಗರಿಷ್ಠ 4 ಲಕ್ಷ ರೂ.ಗಳಿಂದ ರೂ 5 ಲಕ್ಷ ರೂ.ಗಳಿಗೆ ವಾರ್ಷಿಕ ಶೇ.2ರ ಬಡ್ಡಿದರಲ್ಲಿ ಸಾಲ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನವು ರೂ.3.50 ಲಕ್ಷಗಳ ಮಿತಿಯಲ್ಲಿರಬೇಕು. ಮತ್ತು ವಯೋಮಿತಿ 30 ವರ್ಷದೊಳಗಿರಬೇಕು.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ:

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ., ಮ್ಯಾನೇಜ್ ಮೆಂಟ್ ಮತ್ತು ಕಾಮರ್ಸ್, ಸೈನ್ಸ್ ಮತ್ತು ಟೆಕ್ನಾಲಜಿ, ಅಗ್ರಿಕಲ್ಚರ್ ಮತ್ತು ಅಲೈಡ್ ಸೈನ್ಸಸ್/ಟೆಕ್ನಾಲಜಿ, ಮೆಡಿಸಿನ್, ಹ್ಯುಮ್ಯಾನಿಟೀಸ್ ಮತ್ತು ಸೋಸಿಯಲ್ ಸೈನ್ಸಸ್) ವ್ಯಾಸಂಗಕ್ಕೆ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗರಿಷ್ಠ 15.00ಲಕ್ಷ ರೂ.ಗಳ ಮಿತಿಯಲ್ಲಿರಬೇಕು. ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚಿನ ಅಂಕ ಪಡೆದಿರಬೇಕು. QS World Ranking 1000 ರೊಳಗೆ ಬರುವ ವಿಶ್ವ ವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದಿರಬೇಕು. ವಾರ್ಷಿಕ ಗರಿಷ್ಠ 25 ಲಕ್ಷ ರೂ.ಗಳು ಹಾಗೂ ಪೂರ್ಣ ಕೋರ್ಸ್‍ನ ಅವಧಿಗೆ 50 ಲಕ್ಷ ರೂ.ಗಳ ಸಾಲವನ್ನು ಬಡ್ಡಿರಹಿತವಾಗಿ ಒದಗಿಸಲಾಗುವುದು. ಸಾಲದ ಭದ್ರತೆಗೆ ನಿಗಮಕ್ಕೆ ಅರ್ಜಿದಾರ/ಜಾಮೀನುದಾರ/ಪೋಷಕರ ಸ್ಥಿರಾಸ್ತಿಯನ್ನು ನಿಗಮಕ್ಕೆ ಆಧಾರ ಮಾಡಬೇಕು. ಅರ್ಜಿಯ ಜೊತೆಯಲ್ಲಿ ವಿದೇಶಿ ವಿಶ್ವ ವಿದ್ಯಾಲಯದ ಪ್ರವೇಶ ಪತ್ರ (ಆಪರ್ ಲೆಟರ್) ವಿದ್ಯಾರ್ಥಿಯ ವೀಸಾ ಪಾಸ್ ಪೋರ್ಟ್ ಮತ್ತು ಏರ್ ಟಿಕೇಟ್ ಪ್ರತಿ ಒದಗಿಸಬೇಕು. ಸ್ನಾತಕೋತ್ತರ ಕೋರ್ಸ್ ಗಳಿಗೆ ವಯೋಮಿತಿ 32, ಪಿಎಚ್‍ಡಿ ಕೋರ್ಸ್‍ಗಳಿಗೆ 35 ವರ್ಷಗಳ ವಯೋಮಿತಿಯೊಳಗೆ ಇರಬೇಕು.

ಸ್ವಾವಲಂಬಿ ಸಾರಥಿ ಯೋಜನೆ:

ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂಕ್ ಮಂಜೂರು ಮಾಡುವ ಘಟಕ ವೆಚ್ಚದ ಶೇ.50 ರಷ್ಟು, ಗರಿಷ್ಟ ರೂ.3 ಲಕ್ಷಗಳ ಸಹಾಯಧನವನ್ನು (ಸಬ್ಸಿಡಿ) ನಿಗಮದಿಂದ ಬಿಡುಗಡೆ ಮಾಡಲಾಗುವುದು. ಸೌಲಭ್ಯ ಪಡೆಯಲು ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98 ಸಾವಿರಗಳು, ಪಟ್ಟಣ ಪ್ರದೇಶದವರಿಗೆ ರೂ.1.20 ಲಕ್ಷಗಳ ಒಳಗಿರಬೇಕು, ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು. ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು.

ಸ್ವಯಂ ಉದ್ಯೋಗ ಸಾಲ ಯೋಜನೆ

(ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ):

ಹಿಂದುಳಿದ ವರ್ಗಗಳಿಗೆ ಸೇರಿದವರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳಿಗೆ ರಾಷ್ಟ್ರೀಕೃತ ಬ್ಯಾಂಕ್/ವಾಣಿಜ್ಯ/ಗ್ರಾಮೀಣ ಬ್ಯಾಂಕ್ ಗಳು/ ಷೆಡ್ಯೂಲ್ ಬ್ಯಾಂಕುಗಳ ಮೂಲಕ ಸಾಲ ಪಡೆದಲ್ಲಿ ನಿಗಮದಿಂದ ಶೇ.20ರಷ್ಟು ಗರಿಷ್ಠ ರೂ.1 ಲಕ್ಷಗಳ ಸಹಾಯಧನವನ್ನು (ಸಬ್ಸಿಡಿ) ನಿಗಮದಿಂದ ಬಿಡುಗಡೆ ಮಾಡಲಾಗುವುದು. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98 ಸಾವಿರಗಳು, ಪಟ್ಟಣ ಪ್ರದೇಶದವರಿಗೆ ರೂ.1.20 ಲಕ್ಷಗಳ ಒಳಗಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ:

ಹಿಂದುಳಿದ ವರ್ಗಗಳ ವಿದ್ಯಾವಂತ ಯುವಜನರನ್ನು ಗುರುತಿಸಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ತರಬೇತಿಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಐಟಿಐ, ಜಿಟಿಟಿಸಿ, ಕೆಜಿಟಿಟಿಐ, ಎಟಿಡಿಸಿ, ವಿಟಿಯು ಮತ್ತು ಕಾಳಿದಾಸ ಶಿಕ್ಷಣ ಸಂಸ್ಥೆ ಗದಗ ಇವರ ಮೂಲಕ ವಿವಿಧ ಅಲ್ಪಾವಧಿ ಮತ್ತು ಕೌಶಲ್ಯ ತರಬೇತಿಯನ್ನು ನೀಡಿ ಅವರ ಉದ್ಯೋಗ ಸಾಮರ್ಥ್ಯವನ್ನು ಹಾಗೂ ಸಾಮಾಜಿಕ/ಆರ್ಥಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಉದ್ಯೋಗಿ ಮುಖಿಗಳನ್ನಾಗಿಸುವ ತರಬೇತಿ ನೀಡಲಾಗುತ್ತದೆ.

10ನೇ ತರಗತಿ, ದ್ವಿತೀಯ ಪಿ.ಯು.ಸಿ., ಡಿಪ್ಲಮೋ, ಪದವಿ, ಎಂಜಿನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿರಬೇಕು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು. ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕುಟುಂಬದ ವಾರ್ಷಿಕ ವರಮಾನ/ಆದಾಯ ಮಿತಿ ಇರುವುದಿಲ್ಲ. ಪ್ರವರ್ಗ-2ಎ,3ಎ ಮತ್ತು 3ಬಿಗೆ ಸೇರಿದ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ/ಆದಾಯ ರೂ.8 ಲಕ್ಷಗಳಿಗಿಂತ ಕಡಿಮೆ ಇರಬೇಕು. ಅರ್ಜಿದಾರರು https://www.kaushalkar.com/ ಜಾಲ ತಾಣದಲ್ಲಿ ಅರ್ಜಿ ಸಲ್ಲಿಸಬಹುದು.

ಹೊಲಿಗೆ ಯಂತ್ರ ವಿತರಣೆ ಯೋಜನೆ:

ಹಿಂದುಳಿದ ವರ್ಗಗಳ ಬಡ ಕುಟುಂಬದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆಯಲ್ಲಿ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98 ಸಾವಿರಗಳು ಪಟ್ಟಣ ಪ್ರದೇಶದವರಿಗೆ ರೂ.1.20 ಲಕ್ಷ ಒಳಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.

ಈ ಎಲ್ಲಾ ಯೋಜನೆಗಳು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ, ಮತ್ತು ಇದರ ಉಪ ಸಮುದಾಯಗಳನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ ಉಳಿದ ಸಮುದಾಯಗಳಿಗೆ ಅನ್ವಯವಾಗುತ್ತದೆ.

ಈ ಎಲ್ಲಾ ಯೋಜನೆಗಳಡಿಯಲ್ಲಿ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು, (ಶ್ರೀ/ಶ್ರೀಮತಿ ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇದ್ದು ಹೊಂದಾಣಿಕೆಯಾಗಬೇಕು.

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. 2023-24 ಮತ್ತು 2024-25ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಈ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗಗಳ ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ನಿಗಮದ ವೆಬ್‍ಸೈಟ್ www.dbcdc.karnataka.gov.in ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ ನಿಗಮದ ಸಹಾಯವಾಣಿ ಸಂಖ್ಯೆ 080-22374832 ಮತ್ತು 8050770004 ಅಥವಾ 8050770005 ಸಂಪರ್ಕಿಸಬಹುದು.

ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜೂನ್, 30 ರೊಳಗೆ ಸೇವಾಸಿಂಧು ತಂತ್ರಾಂಶದ ಮುಖಾಂತರ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ದೂರವಾಣಿ ಸಂಖ್ಯೆ: 08272-221656 ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಹಾದೇವಿ ಅವರು ತಿಳಿಸಿದ್ದಾರೆ.

Comments are closed.