Belthangady: ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣ: ಪ್ರಮುಖ ಆರೋಪಿಗಳನ್ನು ಬೆಳ್ತಂಗಡಿಗೆ ಕರೆತಂದು ಸ್ಥಳ ಮಹಜರು

Share the Article

Belthangady: ಕುರಿಯಾಳ ಗ್ರಾಮದ ಇರಾ ಕೋಡಿಯಲ್ಲಿ ಮೇ 27 ರಂದು ಸಂಜೆ ನಡೆದ ಪಿಕಪ್‌ ಚಾಲಕ ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿಯ ನಾಲ್ಕು ಸ್ಥಳಗಳಿಗೆ ಪೊಲೀಸರು ಸೋಮವಾರ ಕರೆತಂದು ಸ್ಥಳ ಮಹಜರು ಮಾಡಿದರು.

ಐವರನ್ನು ಈಗಾಗಲೇ ಬಂಧನ ಮಾಡಿದ್ದು, ಕಸ್ಟಡಿಗೆ ಪಡೆಯಲಾಗಿದೆ. ಪೊಲೀಸರು ಆರೋಪಿಗಳು ಓಡಾಡಿದ ವಿವಿಧ ಸ್ಥಳಗಳಿಗೆ ತೆರಳಿ ಮಹಜರು ಪ್ರಕ್ರಿಯೆಯನ್ನು ಮಾಡಿದ್ದಾರೆ.

ಜೂನ್‌ 2 ರಂದು ಮುಂಡರ ಕೋಡಿ ನಿವಾಸಿ ದೀಪಕ್‌ (21), ತೆಂಕಬೆಳ್ಳೂರು ಗ್ರಾಮದ ಸುಮಿತ್‌ ಆಚಾರ್ಯ (27) ಇವರನ್ನು ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಬೆಳ್ತಂಗಡಿಯ ಗುರುವಾಯನಕೆರೆ ಅಂಗಡಿ, ಬೆಳ್ತಂಗಡಿಯ ಸಂತೆಕಟ್ಟೆ ಮೊಬೈಲ್‌ ಅಂಗಡಿ, ಬೆಳ್ತಂಗಡಿ ಮೂರು ಮಾರ್ಗದ ಬಳಿ, ಉಜಿರೆಯ ನಿಡಿಗಲ್‌ ನದಿಯ ಬಳಿ ಕರೆತಂದು ಸ್ಥಳ ಮಹಜರು ಮಾಡಿದ್ದಾರೆ.

ದೀಪಕ್‌, ಸುಮಿತ್‌ ಆಚಾರ್ಯ ಇವರು ಅಬ್ದುಲ್‌ ರಹಿಮಾನ್‌ ಕೊಲೆ ಮಾಡಿದ ನಂತರ ಬೈಕ್‌ ಮೂಲಕ ನೇರ ಬೆಳ್ತಂಗಡಿ ಕಡೆ ಪ್ರಯಾಣ ಮಾಡಿದ್ದರು. ಗುರುವಾಯನಕರೆ ತಲುಪಿ ಅಲ್ಲಿಯ ಅಂಗಡಿಯೊಂದರಲ್ಲಿ ಹೊಸ ರೈನ್‌ ಕೋಟ್‌ ಖರೀದಿ ಮಾಡಿ ನಂತರ ಬೆಳ್ತಂಗಡಿಯ ಸಂತೆಕಟ್ಟೆ ಮೊಬೈಲ್‌ ಶಾಪ್‌ಗೆ ಬಂದು ಸಿಮ್‌ ಪಡೆದು ಮೂರು ಮಾರ್ಗದ ಬಳಿಯ ಚರಂಡಿಗೆ ಸಿಮ್‌ ಎಸೆದು ನೇರ ಕಲ್ಮಂಜ ಗ್ರಾಮದ ನಿಡಿಗಲ್‌ ನದಿಗೆ ತಮ್ಮ ಮೊಬೈಲ್‌ ಎಸೆದು ಚಿಕ್ಕಮಗಳೂರು ಕಡೆ ಪರಾರಿಯಾಗಿದ್ದರು ಎಂದು ವರದಿಯಾಗಿದೆ.

Comments are closed.