Puttur: ಪುತ್ತೂರು: ಮಾಜಿ ಗ್ರಾ.ಪಂ. ಸದಸ್ಯರ ಮೇಲೆ ಹಲ್ಲೆ : ದೂರು ದಾಖಲು

Puttur: ಪುತ್ತೂರು: ಗಾಳಿಮಳೆಯಿಂದ ಹಾನಿಗೊಂಡ ಮನೆಯನ್ನು ವೀಕ್ಷಿಸಲೆಂದು ತೆರಳಿದ್ದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಅವರ ಜೊತೆಗಿದ್ದ ಇಬ್ಬರ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ. ಜೂನ್ 1 ರಂದು ಈ ಘಟನೆ ನಡೆದಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 1 ರ ಬೆಳಿಗ್ಗೆ ಹಾಲಿ ಪಂಚಾಯತ್ ಸದಸ್ಯರಾದ ಜಯಂತ ಪೂಜಾರಿ ಮತ್ತು ಪಂಚಾಯತ್ ಮಾಜಿ ಅಧ್ಯಕ್ಷರಾದ ಎ.ಕೆ.ಜಯರಾಮ ರೈ ಅವರು ಹನೀಫ್ ಅವರಿಗೆ ಕರೆ ಮಾಡಿ ಕೆಯ್ಯೂರು ಗ್ರಾಮದ ಪಾತುಂಜದಲ್ಲಿರುವ ಅಬ್ದುಲ್ ಖಾದರ್ ಅವರ ಮನೆಯ ಮೇಲ್ಛಾವಣಿ ಗಾಳಿಮಳೆಗೆ ಕುಸಿದಿರುವ ಕುರಿತು ಅಪಾರ ನಷ್ಟ ಉಂಟಾಗಿರುವ ಕಾರಣ ಈ ಕುರಿತು ಪರಿಶೀಲನೆ ಮಾಡಲು ಜೊತೆಯಾಗಿ ಹೋಗಲು ತಿಳಿಸಿದ್ದರು.
ಅಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಹನೀಫ್ ಕೆಎಂ, ಜಯಂತ ಪೂಜಾರಿ ಹಾಗೂ ಎ.ಕೆ.ಜಯರಾಮ್ ರೈ ಅವರು ಪಾತುಂಜದಲ್ಲಿರುವ ಅಬ್ದುಲ್ ಖಾದರ್ ಮನೆಗೆ ತೆರಳಿದ್ದರು. ಆಗ ಪಕ್ಕದ ಮನೆಯ ಹಾರೀಸ್ ಎಂಬಾತ ಇವರನ್ನು ಅಡ್ಡಗಟ್ಟಿದ್ದು, ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿದ್ದಾನೆ. ನಂತರ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆ ಮಾಡಿರುವುದಾಗಿ ಕೆಯ್ಯೂರು ಗ್ರಾಮದ ನಿವಾಸಿ, ಉದ್ಯಮಿ ಹಾಗೂ ಕೆಯ್ಯೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹನೀಫ್ ಕೆ.ಎಂ ಅವರು ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಹಾರೀಸ್ ವಿರುದ್ಧ ಪ್ರಕರಣ ದಾಖಲಾಗಿದೆ.
Comments are closed.