Belthangady: ಚೇಂಜ್ ಇಲ್ಲ ಎಂದು ಬಸ್ಸಿನಿಂದ ಏಕಾಏಕಿ ಗ್ರಾಹಕರನ್ನು ಇಳಿಸುತ್ತಿರುವ KSRTC ಕಂಡಕ್ಟರ್’ಗಳು

Share the Article

ಸರಿಯಾದ ಚೇಂಜ್ ಇಲ್ಲದೆ ಬಸ್ ಹತ್ತಿದ ಏಕೈಕ ಕಾರಣದಿಂದ ಕೆಎಸ್ಆರ್ಟಿಸಿ ಬಸ್ಸುಗಳು ಅರ್ಧದಾರಿಯಲ್ಲಿ ಪ್ರಯಾಣಿಕರನ್ನು ಇಳಿಸುತ್ತಿವೆ. ಇದಕ್ಕೆ ಫ್ರೆಶ್ ಆದ ಉದಾಹರಣೆ ಇವತ್ತು ಬೆಳ್ತಂಗಡಿಯಲ್ಲಿ ನಮ್ಮ ಕಣ್ಣ ಮುಂದೆಯೇ ನಡೆದಿದೆ.

ಇವತ್ತಿನ ದಿನ  ಎಲ್ಲೆಲ್ಲೂ ಸ್ಪರ್ಧೆಗಳಿವೆ. ಸರ್ಕಾರಿ ಬಸ್ಸುಗಳಿಗೆ ಖಾಸಗಿ ಬಸ್ಸುಗಳು ಇನ್ನಿಲ್ಲದಂತೆ ಸ್ಪರ್ಧೆ ಓಡ್ಡುತ್ತಿವೆ. ಅಷ್ಟೇ ಅಲ್ಲ, ಪ್ರೈವೇಟ್ ಬಸ್ಸುಗಳು ಭರಪೂರ ಲಾಭ ಮಾಡಿಕೊಳ್ಳುತ್ತಿವೆ. ಇದರ ಮಧ್ಯೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಅಲ್ಲಿಗೆ ಕೆಎಸ್ಆರ್ಟಿಸಿಯ ಅರ್ಧಕರ್ಧ ಆದಾಯ ಖಾಲಿ. ಈ ಸಂದರ್ಭದಲ್ಲಿ ಒಂದು ಸಂಸ್ಥೆ ಮತ್ತು ಅದರ ಸಿಬ್ಬಂದಿಗಳು ಅತ್ಯಂತ ಎಚ್ಚರಿಕೆಯಿಂದ ಇದ್ದು ಹೆಚ್ಚಿನ ಪ್ರಮಾಣದ ಮೌಲ್ಯಯುತ ಸರ್ವಿಸ್ ಗಳನ್ನು ನೀಡಿ ಜನರನ್ನು ಆಕರ್ಷಿಸಬೇಕು. ಅದು ಬಿಟ್ಟು, ಇನ್ನೂರು ರೂಪಾಯಿ ಕೊಟ್ಟರೆ ರೂಪಾಯಿ ಚೇಂಜ್ ಇಲ್ಲ ಎಂದು ಪ್ರಯಾಣಿಕನನ್ನು ದಾರಿಮಧ್ಯೆ ಇಳಿಸುತ್ತಿದ್ದಾರೆ ಸಿಬ್ಬಂದಿಗಳು.

ಇಂದು (ಜೂನ್‌ 1) ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎ 19 F 3182 ಎಂಬ ಬಸ್ಸು 8:00 ಸುಮಾರಿಗೆ ಬೆಳ್ತಂಗಡಿ ತಲುಪಿತ್ತು. ಅಲ್ಲಿ ಹಳ್ಳಿಯ ವ್ಯಕ್ತಿಯೊಬ್ಬರು ಬಸ್ ಏರಿ ಕುಳಿತು ಉಜಿರೆಗೆ ಟಿಕೆಟ್ ಕೇಳಿದ್ದರು. 12 ರೂಪಾಯಿ ಸರಿಯಾದ ಚಿಲ್ಲರೆ ಇಲ್ಲ ಎನ್ನುವ ಕಾರಣದಿಂದ ಕಂಡಕ್ಟರ್ ಗ್ರಾಹಕನನ್ನು ಉಜಿರೆಯಿಂದ ಸುಮಾರು 150 ಮೀಟರ್ ದೂರದಲ್ಲಿ ಇಳಿಸಿದ್ದಾರೆ. ಅಷ್ಟೇ ಅಲ್ಲ, ಏಕವಚನದ ಮಾತು, ಹಲವು ಡೈಲಾಗ್ಸ್ ಮತ್ತು ದರ್ಪ ಬೇರೆ.

“ಸರಿಯಾಗಿ ಚೇಂಜ್ ತರಕ್ಕೆ ಆಗಲ್ಲ ನಿಂಗೆ? ಯಾಕೆ ಹತ್ತುತ್ತೀಯ? ಇಳಿ ಮೊದಲು. ಬಸ್ಸು ಇಲ್ಲಿ 15 ನಿಮಿಷ ನಿಂತಿತ್ತು. ಚೇಂಜ್ ಮಾಡ್ಕೊಂಡು ಬರಬೇಕಲ್ವಾ. (ಬಸ್ಸು 15 ನಿಮಿಷ ನಿಂತದ್ದು ಡ್ರೈವರ್ ಮತ್ತು ಕಂಡಕ್ಟರ್ ಗಳಿಗಾಗಿ, ಅವರ ಟೀ ಕಾಫಿ ತಿಂಡಿಗಾಗಿ. ಅಥವಾ ಪಾನ್ ಪರಾಗ್ ಗಾಗಿ ಕೂಡಾ ಇರಬಹುದು, ಗ್ರಾಹಕನಿಗೆ ಅಲ್ಲ ನೆನಪಿಡಿ). ಈ ಜನಸ್ನೇಹಿ (!!!) ಕಂಡಕ್ಟರ್ ಪಕ್ಕದವರಿಂದ ಚೇಂಜ್ ಪಡೆಯಲು ಅಥವಾ ಇತರ ಸಹಪ್ರಯಾಣಿಕರ ಬಳಿ ಚಿಲ್ಲರೆ ಇದೆಯಾ ಎಂದು ಕೇಳಲು ಕೂಡಾ ಗ್ರಾಹಕನನ್ನು ಕೊಂಚವೂ ಪ್ರೋತ್ಸಾಹಿಸಲಿಲ್ಲ. ಸುತ್ತ ಕುಳಿತಿದ್ದ ವ್ಯಕ್ತಿಗಳ ಬಳಿ ಕೂಡಾ 200 ರೂಪಾಯಿಯ ಚಿಲ್ಲರೆ ಇದೆಯಾ ಎಂದು ಪ್ರಶ್ನಿಸಲಿಲ್ಲ. ಇದು ಒಟ್ಟಾರೆ ಹಸಿವೆಯಿಲ್ಲದ ಸಂಸ್ಥೆಗಳ ಅಥವಾ ಅಲ್ಲಿನ ನೌಕರರ ನಡವಳಿಕೆ. ಕೆಎಸ್ ಆರ್ ಟಿಸಿ ಸಂಸ್ಥೆಗೆ ಇಂಥ ಸಿಬ್ಬಂದಿಗಳು ಬೇಕಾ?

ಕೆಎಸ್ಆರ್ಟಿಸಿ ಸಂಸ್ಥೆಯಲ್ಲಿ ಇಂತಹ ಹತ್ತಾರು ಉದಾಹರಣೆಗಳು ದಿನನಿತ್ಯ ನಮಗೆ ಗೋಚರಿಸುತ್ತಿವೆ. ‘ಕಸ್ಟಮರ್ ಗಾಗಿ ಅವರು, ಅವರಿಗಾಗಿ ಕಸ್ಟಮರ್ ಗಳು ಅಲ್ಲ’ – ಅನ್ನೋ ಅಂಶ ಇಡೀ ಕೆಎಸ್ಆರ್ಟಿಸಿ ಸಂಸ್ಥೆಗೆ ಇವತ್ತಿಗೂ ಅರ್ಥವಾಗಿಲ್ಲ. ಜರೂರಾಗಿ ಅದನ್ನು ಸಂಸ್ಥೆ ಅರ್ಥ ಮಾಡಿಕೊಂಡು ತನ್ನ ಸಿಬ್ಬಂದಿಗಳಿಗೆ ಮನ ಪರಿವರ್ತನೆಯ ಟ್ರೇನಿಂಗ್ ನೀಡಬೇಕಿದೆ. ಅದು ಬಿಟ್ಟು, ಒಂದು ಕಡೆ ಪ್ರೈವೇಟ್ ಬಸ್ಸುಗಳನ್ನು ದೂರುತ್ತಾ, ಮತ್ತೊಂದೆಡೆ ಉಚಿತ ಮಹಿಳೆಯರನ್ನು ‘ಬಿಟ್ಟಿ ಪ್ರಯಾಣಿಕರು’ ಎಂಬ ತಾತ್ಸಾರದ ದೃಷ್ಟಿಯಲ್ಲಿ ನೋಡುವುದನ್ನು ಇನ್ನಾದರೂ ಬಿಡಬೇಕು.

ಮಹಿಳೆಯರಿಗೆ ಸರ್ಕಾರ ಕೊಟ್ಟ ಸವಲತ್ತು ‘ಶಕ್ತಿ’ ಫ್ರೀ ಬಸ್ಸು. ಅದು ಅವರ ಹಕ್ಕು. ಫ್ರೀ ಬಸ್ಸು ಕೊಟ್ಟ ಬಗ್ಗೆ ನಿಮ್ಮಲ್ಲಿ (ಸಿಬ್ಬಂದಿಗಳಲ್ಲಿ) ಅಸಮಾಧಾನ ಇದ್ದರೆ ಸರ್ಕಾರದ ಅಥವಾ ನಿಮ್ಮ ಸಂಸ್ಥೆಯ ಜತೆ ಕ್ಯಾತೆ ತೆಗೆಯಿರಿ. ಅದು ಬಿಟ್ಟು ನಿಮ್ಮ ಗ್ರಾಹಕರಾಗಿ ಬಸ್ಸೇರುವ ಮಹಿಳೆಯರ ಬಗ್ಗೆ ತುಚ್ಚವಾಗಿ ಕಾಣಬೇಡಿ. ನಿಮ್ಮ ಬಸ್ಸನ್ನೆರುವವರು – ಅವರು ಗಂಡಸರಿಗೆ ಹೆಂಗಸರಿರಲಿ – ಬಿಕನಾಸಿಗಳಲ್ಲ, ಅವರು ನಿಮ್ಮ ಅನ್ನದಾತರೇ.

24 ಗಂಟೆ ಯಾರೊಬ್ಬರೂ ಕೆಎಸ್ ಆರ್ ಟಿಸಿ ಬಸ್ಸು ಹತ್ತದೇ ಇದ್ದರೆ, ನಿಮ್ಮ ಸಂಸ್ಥೆ, ಅದರ ಕೆಂಪು ನೀಲಿ ಮತ್ತಿತರ ಬಣ್ಣಗೆಟ್ಟ ಬಸ್ಸುಗಳು ಅನ್ನೋದು ಕೇವಲ ತಗಡಿನ ಅನಾಥ ಡಬ್ಬಿ ಅಂಗಡಿಯ ಥರ ಧೂಳು ತಿನ್ನುತ್ತಾ ರಸ್ತೆಯಲ್ಲಿ ನಿಲ್ಲಬೇಕಾಗಿೆ ಬರುತ್ತದೆ. ಇವತ್ತು ಬಸ್ಸಿನಿಂದ ಇಳಿಸಿದ ಕಂಡಕ್ಟರ್ ನ ಕಥೆ ಕೂಡ ಇದಕ್ಕಿಂತ ಭಿನ್ನವಾಗಿರುವುದಿಲ್ಲ! ಗ್ರಾಹಕನಿಗೆ ಮೊದಲು ಮರ್ಯಾದಿ ಕೊಡಲು ಕಲಿಯೋಣ.

 

Comments are closed.