Agriculture: ವಿಕಸಿತ ಕೃಷಿ ಸಂಕಲ್ಪ ಅಭಿಯಾನ – ಪೂರ್ವ ಮುಂಗಾರು ಕೃಷಿ ಜಾಗೃತಿ ಮಾಹಿತಿ

Agriculture: ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವ ದೆಹಲಿ ಮತ್ತು ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್, ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಹಾಗೂ ಇತರೆ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಮೇ 29 ರಿಂದ ಜೂನ್ 12 ರ 2025ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಪ್ರಾರಂಬಿಸಲಾಗಿದ್ದು, ಇದರ ಅಂಗವಾಗಿ ದಿನಾಂಕ 31.05.2025 ರಂದು ಮಂಗಳೂರು ತಾಲೂಕಿನ ಕುಪ್ಪೆಪದವು ಗ್ರಾಮದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪೂರ್ವ ಮುಂಗಾರು ಕೃಷಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಟಿ ಜೆ. ರಮೇಶ ಮಾತನಾಡಿ ಈ ಅಭಿಯಾನದ ಉದ್ದೇಶ ಮತ್ತು ಮಹತ್ವದ ಬಗ್ಗೆ ತಿಳಿಸಿದರು, ಕೇಂದ್ರೀಯ ಮೀನುಗಾರಿಕೆ ಸಂಶೋಧನಾ ಸಂಸ್ಥೆ, ಮಂಗಳೂರು ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ರಾಜೇಶ್ ಕೆ ಎಮ್. ಮಾತನಾಡಿ ಮೀನು ಕೃಷಿ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಮುಖಂಡರಾದ ಮನೋಹರ ಶೆಟ್ಟಿ ಮಾತನಾಡಿ ಪ್ರಸ್ತುತ ಕೃಷಿಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದರು ಹಾಗೂ ರೈತರ ಕ್ಷೇಮಾಭಿವದ್ಧಿ ಪೂರಕ ಯೋಜನೆಗಳನ್ನು ರೂಪಿಸಲು ಒತ್ತು ನೀಡಬೇಕೆಂದು ಸಲಹೆ ನೀಡಿದರು. ಪಶು ವಿಜ್ಞಾನಿ ಡಾ. ಶಿವಕುಮಾರ್ ಆರ್. ವೈಜ್ಞಾನಿಕ ಪಶುಸಂಗೋಪನೆ ಮತ್ತು ಮೇವಿನ ಬೆಳೆಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು, ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್. ಮಾತನಾಡಿ ಮಣ್ಣು ಮತ್ತು ನೀರು ಸಂರಕ್ಷಣೆ, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳ ಬಳಕೆ ಕುರಿತು ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕರಾದ ಪ್ರತಿಭಾ ಹೆಗಡೆ, ದಯಾನಂದ ಶೆಟ್ಟಿ, ದಾಮೋದರ ಶೆಟ್ಟಿ ಕುಪ್ಪೆಪದವು ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮದ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments are closed.