ಕಣ್ಣು ಕಪ್ಪಗಾದ ಸ್ಥಿತಿಯಲ್ಲಿ ಮಸ್ಕ್: ಆಡಳಿತದಿಂದ ಹೊರ ಬಂದ ಸಂದರ್ಭವೇ ಮಸ್ಕ್ ಮುಖಕ್ಕೆ ಆತ ಗುದ್ದಿದ್ದ!

Share the Article

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಆಡಳಿತದಿಂದ ಉದ್ಯಮಿ, ಎಲಾನ್ ಮಸ್ಕ್ ಹೊರ ಬಂದಿರುವ ಸುದ್ದಿ ಒಂದೆರಡು ದಿನ ಹಳೆಯದು. ಇದೀಗ ಫ್ರೆಶ್ ಆಗಿ ಅಪ್ಡೇಟ್ ಬರುತ್ತಿದ್ದು, ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಮುಖ ಅಪ್ಪಚ್ಚಿಯಾಗಿದೆ. ಮಸ್ಕ್ ಮುಖಕ್ಕೆ ಯಾರೋ ಸರಿಯಾಗಿ ಬೀಸಿ ಬಾರಿಸಿದ್ದಾರೆ. ಅವರ ಕಣ್ಣು ಕಪ್ಪಾಗಿದೆ. ಅಲ್ಲಲ್ಲಿ ಕಲೆಗಳಾಗಿವೆ. ಒಂದು ಭಾಗದ ಮುಖ ಊದಿಕೊಂಡಿದೆ. ಯಾರಪ್ಪಾ ವಿಶ್ವದ ನಂಬರ್ ಶ್ರೀಮಂತ ಎಲಾನ್ ಮಸ್ಕ್ ಮುಖಕ್ಕೆ ಇಕ್ಕಿದವರು ಅಂತ ವಿಶ್ವವೇ ಮಾತಾಡಿಕೊಳ್ಳುತ್ತಿದೆ. ಮೊನ್ನೆ ಟ್ರಂಪ್ ಆಡಳಿತದಿಂದ ಹೊರಕ್ಕೆ ಬರುವಾಗ ಮುಂಗೋಪಿ ಡೋನಾಲ್ಡ್ ಟ್ರಂಪ್ ಏನಾದರೂ ತನ್ನ ಎಂದಿನ ಬಾಕ್ಸಿಂಗ್ ಪಂಚ್ ನೀಡಿದ್ರಾ ಅನ್ನೋದು ಕುತೂಹಲ ಮತ್ತು ಅನುಮಾನ.

ಮೊನ್ನೆ ಮಾಧ್ಯಮ ಪ್ರತಿನಿಧಿಗಳು ಎಲಾನ್ ಮಸ್ಕ್’ನ್ನು ನೋಡಿ ಈ ಬಗ್ಗೆ ಕೇಳಿಯೇ ಬಿಟ್ಟಿದ್ದಾರೆ. ಟ್ರಂಪ್ ಹೊಡೆದ್ರಾ ಅಂತ ಕೇಳಿಲ್ಲ, ಕೇಳಕ್ ಕೂಡಾ ಆಗಲ್ಲ ಬಿಡಿ! ಪತ್ರಕರ್ತರ ಪ್ರಶ್ನೆಗೆ, ಅರ್ಧ ಊದಿಸಿಕೊಂಡ ಮುಖದ ಮತ್ತೊಂದು ಬದಿಯಿಂದ ಸಣ್ಣಗೆ ನಕ್ಕು, ”ಓ ಅದಾ? ಅದು ಗುದ್ದಿದ್ದೇ” ಅಂತ ಕನ್ಫರ್ಮ್ ಮಾಡಿದ್ದಾರೆ ಮಸ್ಕ್. ಪತ್ರಕರ್ತರ ಕುತೂಹಲ ಇಮ್ಮಡಿಯಾಗಿದೆ.

ನಂತರ ಈ ಬಗ್ಗೆ ಟ್ರಂಪ್‌ ಜತೆಗಿನ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಮಸ್ಕ್,”ನನ್ನ ಮಗ ಮುಖಕ್ಕೆ ಗುದ್ದಿದ ವೇಳೆ ಕಣ್ಣಿಗೆ ತಾಗಿದ್ದರ ಪರಿಣಾಮ ಒಂದಿಷ್ಟು ಕಪ್ಪಗಾಗಿದೆ’ ಎಂದು ನಗುತ್ತಲೇ ಹೇಳಿದರು. ತಕ್ಷಣಕ್ಕೆ ದೊಡ್ಡ ನ್ಯೂಸ್ ಹೊಡೆಯಲು ಸಂಚು ರೂಪಿಸಿದ್ದ ಮಾಧ್ಯಮದವರಿಗೆ ಭ್ರಮನಿರಸನ ಕಾದಿತ್ತು

ಈ ವೇಳೆ, ಮಸ್ಕ್ ಮಾತನಾಡಿ, ತಾನು ಕೂಡಾ ಭ್ರಮನಿರಸನಗೊಂಡ ವಿಷಯ ಹಂಚಿಕೊಂಡಿದ್ದಾರೆ. ತಮಗೆ ನಿರಾಸೆ ಆದ ಹಿನ್ನೆಲೆಯಲ್ಲಿ ಅಮೆರಿಕದ ಕಾರ್ಯ ದಕ್ಷತಾ ಹುದ್ದೆಯಿಂದ ನಿರ್ಗಮಿಸಿದ್ದಾಗಿ ಮಸ್ಕ್ ಹೇಳಿ ದುಃಖ ತೋಡಿ ಕೊಂಡರು. ತಾವು ಈ ಹುದ್ದೆಯಿಂದ ನಿರ್ಗಮಿಸುತ್ತಿದ್ದರೂ ಟ್ರಂಪ್ ಅವರೊಂದಿಗಿನ ತಮ್ಮ ಸ್ನೇಹ ಸದಾ ಮುಂದುವರಿಯಲಿದ್ದು, ಅವರ ಸಲಹೆಗಾರನ ಪಾತ್ರ ನಿರ್ವಹಿಸಲಿರುವುದಾಗಿ ತಿಳಿಸಿದರು.

Comments are closed.