Crime: ಗರುಡ ಗ್ಯಾಂಗ್ ದರೋಡೆ ಸಂಚು ವಿಫಲ: ಭಟ್ಕಳದಲ್ಲಿ ಮೂವರ ಬಂಧನ!

Share the Article

Crime: ರಾಜ್ಯ ಹೆದ್ದಾರಿ ಭಾಗದ ಬಿಳಾಲಖಂಡ ಗ್ರಾಮದ ಸಾಗರ ರಸ್ತೆ ಕ್ರಾಸ್ ಬಳಿ ಬೆಳಗಿನ ಜಾವ ದರೋಡೆಗೆ ಸಂಚು ರೂಪಿಸಿದ್ದ ಕುಖ್ಯಾತ ‘ಗರುಡ ಗ್ಯಾಂಗ್’ನ ಐವರ ಪೈಕಿ ಮೂವರು ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧಿತರಾಗಿದ್ದಾರೆ. ಇಬ್ಬರು ಆರೋಪಿಗಳು ಮಿಂಚಿನಂತೆ ಪರಾರಿಯಾಗಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಬಂಧಿತರನ್ನು ಚೊಕ್ಕಬೆಟ್ಟು ನಿವಾಸಿ ಜಲೀಲ್ ಹುಸೈನ್ (39), ಗಾಂಧಿನಗರದ ನಾಸಿರ್ ಹಕೀಮ್ (26) ಹಾಗೂ ಇನ್ನೋರ್ವ ಅಪ್ರಾಪ್ತ ಬಾಲಕನೆಂದು ಗುರುತಿಸಲಾಗಿದೆ. ಇವರಲ್ಲಿ ಜಲೀಲ್ ಮೇಲೆ 11 ಪ್ರಕರಣಗಳು ಮತ್ತು ನಾಸಿರ್ ಮೇಲೆ 2 ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಿವೆ.

ಘಟನೆಯಲ್ಲಿ ಪರಾರಿಯಾದ ಆರೋಪಿಗಳು ಜಿಶಾನ್ (ಮುಗ್ದಮ್ ಕಾಲೋನಿ) ಮತ್ತು ನಬೀಲ್ (ಬಟ್ಟಾಗಾಂವ್) ಆಗಿದ್ದಾರೆ. ಬಂಧಿತರು ಕಾರಿನಲ್ಲಿ ಕುಳಿತು ಚಾಕು, ತಾಡಪತ್ರೆ, ಕಾರಾಪುಡಿ, ಬೆಲ್ಟ್, ಮುಚ್ಚುಗಟ್ಟು ಟೋಪಿ ಇತ್ಯಾದಿ ಉಪಕರಣಗಳೊಂದಿಗೆ ದರೋಡೆ ಸಂಚು ರೂಪಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಕಾರನ್ನು ಪರಿಶೀಲಿಸಲು ಮುಂದಾದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಹಿಮ್ಮುಖವಾಗಿ ಚಲಿಸಿದ ಕಾರು ನಿಯಂತ್ರಣ ತಪ್ಪಿ ಗಟಾರಕ್ಕೆ ಬಿದ್ದಿದೆ. ಈ ಮೂಲಕ ಮೂವರು ಸಿಕ್ಕಿಹಾಕಿಕೊಂಡಿದ್ದು, ಉಳಿದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಪರಾರಿಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Comments are closed.