Madikeri: ಮೂವರು ಕಾಫಿ ಕಳ್ಳರು ಅಂದರ್ – ಎಸ್ಪಿ ಶ್ಲಾಘನೆ

Share the Article

Madikeri: ಇತ್ತೀಚಿಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ನಡೆದಿದ್ದ ಮೂರು ಪ್ರತ್ಯೇಕ ಕಾಫಿ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಸುಂಟಿಕೊಪ್ಪದ ಎಲ್. ಮಹೇಶ್ (44) ಮದೆ ಗ್ರಾಮದ ಕೆ.ಆರ್. ವಿನೋದ್ (39) ಹಾಗೂ ಗಾಳಿಬೀಡು ಎರಡನೇ ಮೊಣ್ಣಂಗೇರಿಯ ಕೆ.ಎಂ. ರಾಮಯ್ಯ (28) ಬಂಧಿತ ಆರೋಪಿಗಳಾಗಿದ್ದಾರೆ.

ಮೇ 08ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಾಕತ್ತೂರು ಗ್ರಾಮದ ಎ.ಎಂ. ಅಬ್ಬಾಸ್ ರವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು 13 ಚೀಲ ಒಣಗಿದ ಕಾಫಿಯನ್ನು, ಮೇ 14ರಂದು ಹೊಸ್ಕೇರಿ ಗ್ರಾಮದ ಬಿ.ಡಿ. ಲಾವಿನ್ ರವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು 5 ಚೀಲ ಕಾಫಿಯನ್ನು ಮತ್ತು ಮೇ.19ರಂದು ಮೇಕೇರಿ ಗ್ರಾಮದ ದಿಗಂತ್ ರವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು 15 ಚೀಲ ಕಾಫಿಯನ್ನು ಕಳ್ಳತನ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು.

ಈ ಪ್ರಕರಣಗಳ ಪತ್ತೆಗಾಗಿ ಮಡಿಕೇರಿ ಪೊಲೀಸ್ ಉಪ ವಿಭಾಗದ ಡಿಎಸ್ಪಿ ಪಿ.ಎ. ಸೂರಜ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಚಂದ್ರಶೇಖರ್, ಸಬ್ ಇನ್ಸ್ ಪೆಕ್ಟರ್ ಹೆಚ್.ಈ. ವೆಂಕಟ್, ಅಪರಾಧ ಪತ್ತೆ ಸಿಬ್ಬಂದಿಗಳು, ಡಿ.ಸಿ. ಆರ್.ಬಿ. ಸಿಬ್ಬಂದಿಗಳು, ಹಾಗೂ ತಾಂತ್ರಿಕ ಘಟಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ದಿನಾಂಕ 27-05-2025 ರಂದು ಆರೋಪಿಗಳನ್ನು ಬಂಧಿಸಿ 31 ಚೀಲ ಕಾಫಿ, ಒಂದು ಮಾರುತಿ ಈಕೋ ವಾಹನ, ರಾಡ್ ಕಟ್ಟರ್ ಮತ್ತು ಕಬ್ಬಿಣದ ಹಾರೆಯನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಎಸ್ಪಿ ಶ್ಲಾಘನೆ :

ಈ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.

Comments are closed.