BSNL: ಬಿ.ಎಸ್.ಎನ್.ಎಲ್ ಇದ್ರೂ ಸತ್ತಂಗೆ – ತೋರದಲ್ಲಿ 5 ದಿನದಿಂದ ನೆಟ್ವರ್ಕ್ ನೆಟ್ಗಿಲ್ಲ!! ಜನರೇಟರ್ಗೆ ಹಾಕಲ್ಲ ಡೀಸೇಲ್!

BSNL: ಆನೆ ತೆಗೆದುಕೊಂಡವನಿಗೆ ಅಂಕುಶ ತೆಗೆದುಕೊಳ್ಳಲು ಸಾಧ್ಯವಾಗದೇ? ಎಂಬ ಮಾತಿದೆ. ಈ ನುಡಿಗಟ್ಟು ಅಕ್ಷರಶಃ ಬಿ.ಎಸ್.ಎನ್.ಎಲ್.ಗೆ ವ್ಯತಿರಿಕ್ತವಾಗಿ ಅನ್ವಯವಾಗುತ್ತದೆ. ಬಿ.ಎಸ್.ಎನ್.ಎಲ್. ಕೋಟಿ ಹಣ ಖರ್ಚು ಮಾಡಿ ಟವರ್ಗಳನ್ನು ನಿರ್ಮಿಸುತ್ತದೆ. ಆದರೆ ಪವರ್ ಕಟ್ ಆದಾಗ ಜನರೇಟರ್ ಗೆ ಡೀಸೆಲ್ ಹಾಕಿ ಚಾಲು ಮಾಡಲು ಬಿ.ಎಸ್.ಎನ್.ಎಲ್. ಗೆ ಕಂಜೂಸ್ ತನದಿಂದಾಗಿ ಸಾಧ್ಯವಾಗುತ್ತಿಲ್ಲ!
ಕೊಡಗಿನಲ್ಲಿ ಕೆಲವು ದಿನಗಳಿಂದ ಗಾಳಿ ಮಳೆಯ ಆರ್ಭಟ ಜೋರಾಗಿದ್ದು, ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು ಬೀಳುತ್ತಿವೆ. ಹೊಳೆ ನದಿಗಳು ತುಂಬಿ ರಸ್ತೆ, ಸೇತುವೆ ಸಂಪರ್ಕ ಕಡಿತಗೊಂಡಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಸಂವಹನಕ್ಕಾಗಿ ಮೊಬೈಲ್ ಆಸರೆಯಾಗಿದೆ. ಆದರೆ ಜನರೇಟರ್ ಗೆ ಡೀಸೆಲ್ ತುಂಬಿಸದ ಕಾರಣ ಕಳೆದ ಐದು ದಿನಗಳಿಂದ ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದ ಕೊಟ್ಟಚ್ಚಿ ಮೊಟ್ಟೆ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಮಳೆಯಲ್ಲಿ ಕೊಚ್ಚಿ ಹೋಗಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಬಾರೀ ಗಾಳಿ ಮಳೆ ಸೃಷ್ಟಿಸಿರುವ ಅವಾಂತಾರದಿಂದಾಗಿ ಕಳೆದ ಐದಾರು ದಿವಸಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ ಮಳೆ ಗಾಳಿ ಹಾಗೂ ಮರಗಳು ವಿದ್ಯುತ್ ಕಂಬಗಳ ಮೇಲೆ ಬೀಳತ್ತಿರುವುದು ಸಹಜ ಕಾರಣವಾಗಿದೆ ಎನ್ನಬಹುದು. ಆದರೆ ಬಿ.ಎಸ್.ಎನ್.ಎಲ್. ಟವರ್ ಗಟ್ಟಿಮುಟ್ಟಾಗಿ ಯಥಾಸ್ಥಿತಿಯಲ್ಲಿದೆ. ಅಲ್ಲದೇ ಕರೆಂಟ್ ಇಲ್ಲದ ಸಮಯದಲ್ಲಿ ಉಪಯೋಗಿಸಲೆಂದು ಇರಿಸಿರುವ ಜನರೇಟರ್ ಕೂಡ ಸುಸ್ಥಿತಿಯಲ್ಲಿದೆ. ಆದರೂ ಕೂಡ ಕಳೆದ ಐದು ದಿನಗಳಿಂದ ಕರೆಂಟ್ ಇಲ್ಲದ ಕಾರಣ ಜನರೇಟರ್ಗೆ ಡೀಸೇಲ್ ತುಂಬಿಸಿ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಬೇಕಾಗಿರುವ ಬಿ.ಎಸ್.ಎನ್.ಎಲ್. ಅಧಿಕಾರಿಗಳು ಈ ಬಗ್ಗೆ ಗಮನಹರಿಸದೇ ಗ್ರಾಹಕರು ಖಾಸಗಿ ಟೆಲಿಕಾಂ ಕಂಪೆನಿಗಳತ್ತ ಹೊರಳಲು ಪರೋಕ್ಷವಾಗಿ “ಆಫರ್” ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಧೋಗತಿಗೆ ಇಳಿದಿದ್ದ ಬಿ.ಎಸ್.ಎನ್.ಎಲ್. ಇತ್ತೀಚಿನ ದಿನಗಳಲ್ಲಿ ಚೇತರಿಸಿಕೊಂಡು ಬೇರೆ ಕಂಪೆನಿಗಳಿಗಿಂತ ಅಗ್ಗದ ಬೆಲೆಯಲ್ಲಿ ತನ್ನ ಸೇವೆಗಳಿಗೆ ಶುಲ್ಕವನ್ನು ವಿಧಿಸುತ್ತಿದೆ. ಇದರಿಂದ ಸಾವಿರಾರು ಮಂದಿ ಹೊಸ ಗ್ರಾಹಕರು ಬಿ.ಎಸ್.ಎನ್.ಎಲ್. ನತ್ತ ವಾಲಿದ್ದಾರೆ. ಆದರೆ ಕರೆಂಟ್ ಕೈಕೊಟ್ಟಾಗ ಜನರೇಟರ್ ಗೆ ಡೀಸೇಲ್ ಭರ್ತಿ ಮಾಡದೇ ನೆಟ್ ವರ್ಕ್ ಸಮಸ್ಯೆ ಸೃಷ್ಟಿಸಿ ಗ್ರಾಹಕರಿಗೆ ಕೈಕೊಡತ್ತಿರುವುದು ಎಷ್ಟು ಸರಿ ? ಎಂದು ತೋರ ಕೊಟ್ಟಚ್ಚಿ ಮೊಟ್ಟೆ ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಕೂಡಲೇ ಜನರೇಟರ್ ಗೆ ಡೀಸೇಲ್ ಒದಗಿಸಿ ಸಮರ್ಪಕ ನೆಟ್ ವರ್ಕ್ ಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Comments are closed.