Kamal Haasan: ‘ಕನ್ನಡ’ ಹುಟ್ಟಿದ್ದು ತಮಿಳಿನಿಂದ ಎಂದ ಕಮಲ್ ಹಾಸನ್ – ಬಾರಿ ಆಕ್ರೋಶ

Kamal Haasan: ಮಣಿರತ್ನಂ ಹಾಗೂ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಕೂಡ ನಡೆದಿದೆ. ಇದಕ್ಕೆ ಕನ್ನಡ ನಟ ಶಿವರಾಜ್ಕುಮಾರ್ ಮುಖ್ಯ ಅತಿಥಿಯಾಗಿ ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹೌದು, ಕನ್ನಡದಲ್ಲೂ ನಟಿಸಿದ್ದ ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರು ಡಾ.ರಾಜ್ಕುಮಾರ್ ಅವರ ಕುಟುಂಬದೊಂದಿಗೆ ತೀರಾ ಆಪ್ತತೆ ಹೊಂದಿದ್ದವರು. ರಾಜ್ಕುಮಾರ್ ಹಾಗೂ ಕಮಲ್ ಅವರ ಒಡನಾಟ ಹಲವು ದಶಕಗಳದ್ದು. ಇಂದಿಗೂ ಕಮಲ್ ರಾಜ್ ಕುಟುಂಬದೊಂದಿಗೆ ಅದೇ ಪ್ರೀತಿ, ಬಾಂಧವ್ಯ ಮುಂದುವರಿಸಿದ್ದಾರೆ. ತಮ್ಮ ಥಗ್ ಲೈಫ್ ಸಿನಿಮಾದ ಕಾರ್ಯಕ್ರಮದಲ್ಲೂ ಅವರು ರಾಜ್ಕುಮಾರ್ ಅವರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. “ನನ್ನ ‘ರಾಜ ಪಾರ್ವೈ’ ಚಿತ್ರಕ್ಕೆ ಕ್ಲಾಪ್ ಮಾಡಿ ರಾಜ್ಕುಮಾರ್ ಅವ್ರು ಶುಭ ಕೋರಿದ್ದರು. ಬಳಿಕ ಬೆಂಗಳೂರಿನಲ್ಲಿ ‘ಪುಷ್ಪಕ ವಿಮಾನ’ ಸಿನಿಮಾ ಆರಂಭಿಸಿದಾಗ ಅದಕ್ಕೂ ಅವ್ರೇ ಕ್ಲಾಪ್ ಮಾಡಿದ್ದರು. ಇದು ಆ ಊರಿನಲ್ಲಿರುವ ನನ್ನ ಕುಟುಂಬ, ಅದಕ್ಕಾಗಿ ಶಿವಣ್ಣ ಇಲ್ಲಿ ಬಂದಿದ್ದಾರೆ. ತಮಿಳಿನಿಂದ ಹುಟ್ಟಿದ್ದು ನಿಮ್ಮ ಭಾಷೆ(ಕನ್ನಡ). ಹಾಗಾಗಿ ನೀವು ಅದರಲ್ಲಿ ಒಂದು” ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
ಅಣ್ಣಾವ್ರ ಕುಟುಂಬದ ಮೇಲಿನ ಕಮಲ್ ಹಾಸನ್ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ತಮಿಳಿನಿಂದ ಹುಟ್ಟಿದ್ದು ಕನ್ನಡ ಎನ್ನುವ ಅವರ ಹೇಳಿಕೆ ಕೆಲವರು ಚಕಾರ ಎತ್ತಿದ್ದಾರೆ. ಕನ್ನಡಕ್ಕೆ ತಮಿಳು ಮೂಲ ಅಲ್ಲ. ತಮಿಳಿಗಿಂತಲೂ ಬಹಳ ಹಳೆಯ ಭಾಷೆ ಕನ್ನಡ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಮಲ್ ಹೇಳಿಕೆ ಬಗ್ಗೆ ಪರೋ ವಿರೋಧ ಚರ್ಚೆ ನಡೆಯುತ್ತಿದೆ.
Comments are closed.