Karnataka Gvt: ಕನ್ನಡಕ್ಕೆ 32 ಕೋಟಿ, ಉರ್ದುಗೆ 100 ಕೋಟಿ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ?

Share the Article

Karnataka Gvt: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕನ್ನಡ ಭಾಷೆಗೆ ಬರೀ 32 ಕೋಟಿ ಅನುದಾನ ಬಿಡುಗಡೆಗೊಳಿಸಿ ಉರ್ದು ಭಾಷೆಗೆ ಬರೋಬ್ಬರಿ ನೂರು ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.


ಹೌದು, ಕರ್ನಾಟಕ ಸರ್ಕಾರವು ಕನ್ನಡದ ಅಸ್ಮಿತೆಯ ವಿಚಾರದಲ್ಲಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ. ರಾಜ್ಯದಲ್ಲಿ ಕೆಲವು ಪ್ರಭಾವಿ ಸಚಿವರು ಬಹಿರಂಗವಾಗಿ ಉರ್ದು ಭಾಷೆಯನ್ನು ಬಳಕೆ ಮಾಡುತ್ತಾ, ಸರ್ಕಾರದ ಕಾರ್ಯಕ್ರಮಗಳಲ್ಲಿ ಬೋರ್ಡ್, ಬ್ಯಾನರ್‌ಗಳು ಉರ್ದುವಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಇದೀಗ ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಕನ್ನಡಕ್ಕಿಂತ ಉರ್ದುಗೇ ಹೆಚ್ಚು ಅನುದಾನ ನೀಡಲಾಗಿದೆ ಎನ್ನುವ ವಿಚಾರವು ಭಾರೀ ವಿರೋಧಕ್ಕೆ ಕಾರಣವಾಗುತ್ತಿದೆ.

ಅಂದಹಾಗೆ ಬರಹಗಾರ ಸುನೀಲ್ ಜೆ ಅವರು ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು. ಭಾಷಾ-ನಿರ್ದಿಷ್ಟ ಬಜೆಟ್ ಹಂಚಿಕೆಗಳ (Language-Specific Budget Allocations) ವಿವರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 32 ಕೋಟಿ ಕನ್ನಡಕ್ಕೆ ಹಾಗೂ ಉರ್ದುಗೆ ಬರೋಬ್ಬರಿ 100 ಕೋಟಿ ರೂಪಾಯಿ ನೀಡಿದೆ ಎಂದು ಹೇಳಲಾಗಿದೆ.

ಅಲ್ಲದೆ ಪೋಸ್ಟ್ ನಲ್ಲಿ “ಅಷ್ಟಕ್ಕೂ ಈ ನೆಲದ ನುಡಿಯಲ್ಲದ ಉರ್ದುಗೆ ಯಾಕೆ ಇಷ್ಟೊಂದು ಬಜೆಟ್? ಕರ್ನಾಟಕದಲ್ಲಿನ ಮುಸ್ಲಿಮರ ತಾಯ್ನುಡಿ ಮತಾಂತರದ ನಂತರ ಉರ್ದುವಾಗಿ ಬದಲಾಯಿತೋ ಅಥವಾ ಅವರು ಹೊರಗಿನಿಂದ ವಲಸೆ ಬಂದವರೋ ಗೊತ್ತಿಲ್ಲ. ಆದರೆ ಅವರನ್ನು ಹಂತಹಂತವಾಗಿ ಕನ್ನಡದ ಕಡೆ ತರಬೇಕಾದ್ದು ರಾಜ್ಯ ಸರ್ಕಾರದ ಕೆಲಸ. ಮರಾಠಿ, ಲಂಬಾಣಿ, ಕೊಂಕಣಿ, ತೆಲುಗು, ತಮಿಳು ಸೇರಿದಂತೆ ಉಳಿದವರನ್ನೂ ಕಾಲಕ್ರಮೇಣ ಕನ್ನಡಕ್ಕೆ ತರೋ ಕೆಲಸ ಮಾಡಿ ಎಂದರೆ, ಈ ಕಾಂಗ್ರೆಸ್ ನವರು ತದ್ವಿರುದ್ಧವಾದ ಕೆಲಸಗಳನ್ನೇ ಮಾಡ್ತಿದಾರೆ” ಎಂದು ಕಿಡಿಕಾರಿದ್ದಾರೆ.

ಜೊತೆಗೆ ಬಿಜೆಪಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದು ತನ್ನ ಎಕ್ಸ್ ಖಾತೆಯಲ್ಲಿ “ಉರ್ದು ಪ್ರಿಯ ಸಿದ್ದರಾಮಯ್ಯನವರಿಂದ ಕನ್ನಡಿಗರಿಗೆ ಮತ್ತೊಂದು ಮಹಾ ದ್ರೋಹ! ಉರ್ದು ಭಾಷೆಯ ಅಭಿವೃದ್ಧಿಗೆ ₹100 ಕೋಟಿ ಮೀಸಲು, ಕನ್ನಡ ಭಾಷೆಗೆ ಕೇವಲ ₹32 ಕೋಟಿ. ಸಿಎಂ @siddaramaiah ಅವರೆ, ಕನ್ನಡ ಭಾಷೆಯ ಮೇಲೆ ಏಕಿಷ್ಟು ಅಸಡ್ಡೆ ತುಳು, ಕೊಂಕಣಿ, ಕೊಡವ ಹಾಗು ಅರೆಭಾಷೆ ನಮ್ಮ ಕರ್ನಾಟಕದ ಭಾಷೆಗಳಲ್ಲವೇ? ” ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದೆ.

Comments are closed.