ಜಿಲ್ಲಾಧಿಕಾರಿ ಕಚೇರಿಯ ಒಳಗೇ ಮಹಿಳಾ ಕಾನ್ಸ್ ಸ್ಟೇಬಲ್ ಗುಂಡಿಗೆ ಬಲಿ!

Share the Article

Chennai: ಶನಿವಾರ ರಾತ್ರಿ ಕರ್ತವ್ಯನಿರತರಾಗಿದ್ದ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಭಾನುವಾರ (ಮೇ.25) ಬೆಳಿಗ್ಗೆ ಶವವಾಗಿ ಕಂಡುಬಂದ ಘಟನೆ ತಮಿಳುನಾಡಿನ ನಾಗಪಟ್ಟಣಂ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯೊಳಗೆ ನಡೆದಿದೆ.

ಮೃತ ಕಾನ್‌ಸ್ಟೆಬಲ್ ಅನ್ನು ಮೈಲಾಡುತುರೈ ಜಿಲ್ಲೆಯ ಮನಕುಡಿ ನಿವಾಸಿಯಾಗಿರುವ ಅಭಿನಯ ಎಂದು ಗುರುತಿಸಲಾಗಿದೆ. ಅಭಿನಯರವರು ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಅಭಿನಯರವರು ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಶನಿವಾರ ರಾತ್ರಿ ನಾಗಪಟ್ಟಣಂನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈಕೆಯೊಂದಿಗೆ ಇನ್ನೋರ್ವ ಮಹಿಳಾ ಕಾನ್‌ಸ್ಟೆಬಲ್‌ ಕೂಡ ಕರ್ತವ್ಯದಲ್ಲಿದ್ದರು.

ನಿನ್ನೆ, ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಒಳಗೆ ಗುಂಡಿನ ಸದ್ದು ಕೇಳಿದ್ದು ಈ ವೇಳೆ ಕರ್ತವ್ಯದಲ್ಲಿದ್ದ ಇನ್ನೋರ್ವ ಮಹಿಳಾ ಕಾನ್‌ಸ್ಟೆಬಲ್‌ ಗುಂಡಿನ ಸದ್ದು ಕೇಳಿದ ಜಾಗಕ್ಕೆ ಹೋಗಿ ನೋಡಿದಾಗ ಅಭಿನಯ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ ಇದರಿಂದ ಗಾಬರಿಗೊಂಡ ಮಹಿಳಾ ಕಾನ್‌ಸ್ಟೆಬಲ್‌ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಜಿಲ್ಲಾಧಿಕಾರಿಗಳ ಸಿಬ್ಬಂದಿಗಳ ಜತೆ ತನಿಖೆ ನಡೆಸುತ್ತಿದ್ದಾರೆ.

Comments are closed.