Ravichandran: ರಾಕೇಶ್ ಪೂಜಾರಿ ಸಾವಿನ ಬೆನ್ನಲ್ಲೇ ಕ್ರೇಜಿಸ್ಟಾರ್ ಕರೆ ಕೊಟ್ಟು ನಕ್ಕು ಬಿಡಿ ಅಂದದ್ದು ಯಾಕೆ!?

ಬೆಂಗಳೂರು: ಅಕಾಲಿಕ ನಿಧನರಾದ ಕಾಮಿಡಿ ಕಿಲಾಡಿಗಳು ಸೀಸನ್-3ರ ವಿನ್ನರ್ ರಾಕೇಶ್ ಪೂಜಾರಿ ಅವರ ನೆನಪು ಇನ್ನೂ ಮಾಸಿಲ್ಲ. ಜೀ ವೇದಿಕೆಯಲ್ಲೂ ರಾಕೇಶ್ ಪೂಜಾರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸ್ಮರಿಸಲಾಗಿದೆ. ಕಾಮಿಡಿ ಕಿಲಾಡಿಗಳು ರಾಕೇಶ್‌ನನ್ನು ಅವರ ಸ್ನೇಹಿತರೆಲ್ಲ ನೆನೆದು ಕಣ್ಣೀರಾಗಿದ್ದಾರೆ. ಈ ವೇಳೆ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಈ ಶೋನ ಜಡ್ಜ್ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕೆಲ ಭಾವುಕ ಮಾತುಗಳನ್ನಾಡಿದ್ದಾರೆ. ದೇವರ ಮುಂದೆ ಮನುಷ್ಯ ಅಸಹಾಯಕ ಆಗುತ್ತಿರೋದನ್ನು ಅವರು ಪ್ರಸ್ತಾಪಿಸಿದ್ದಾರೆ.
ʼನಾವೆಲ್ಲ ಇಲ್ಲಿ ಮೌನಾಚರಣೆ ಮಾಡಿದಾಗಲೂ ನಮಗೆ ಕಂಡಿದ್ದು ರಾಕೇಶ್’ನ ನಗು ಮಾತ್ರ. ಮೊದಲನೇ ಸಲ ಅವನು ನಗಿಸುತ್ತಿದ್ದಾನೆ, ಆದ್ರೆ ನಾವು ನಗೋಕೆ ಆಗ್ತಿಲ್ಲ. ಬಹುಶಃ ವಯಸ್ಸಿಗೂ ಆಯಸ್ಸಿಗೂ ಇದ್ದ ನಂಟು ಮುಗಿದಿದೆ. ಹಿಂದೆಯೆಲ್ಲಾ ವಯಸ್ಸಾದರೆ ಮಾತ್ರ ಆಯಸ್ಸು ಮುಗೀಬೇಕು, ಉಸಿರು ನಿಲ್ಲಬೇಕು ಎನ್ನುತ್ತಿದ್ದರು. ಈಗ ದೇವರ ಲೆಕ್ಕಾಚಾರ ತಪ್ಪುತ್ತಿದೆ. ಗ್ರಹಚಾರ ಆಟ ಆಡುತ್ತಿದೆ, ಇದಂತೂ ಸತ್ಯ. ಇಂತದ್ದೆಲ್ಲ ನಡೆದಾಗ ನಮಗೆ ನಂಬಿಕೆ ದೂರ ಆಗ್ತಿದೆ. ಇಲ್ಲಿರೋ ಎಲ್ಲರಿಗೂ ಹೇಳೋದಿಷ್ಟೇ, ಇರುವಷ್ಟು ದಿನ ಬದುಕಿ, ನಗಿ, ಚೆನ್ನಾಗಿರಿʼ ಎಂದು ನಟ ಕ್ರೇಜಿಸ್ಟಾರ್ ರವಿಚಂದ್ರನ್ ಭಾವುಕರಾಗಿದ್ದಾರೆ.
ಯೋಗರಾಜ್ ಭಟ್ ಕೂಡ ಮಾತನಾಡಿ, ಯಾವುದೇ ಒಬ್ಬ ಕಲಾವಿದ ಅಕಾಲಿಕವಾಗಿ ನಿಧನರಾದಾಗ ಅವನು ಹೋದ ಎಂದು ಅಂದುಕೊಳ್ಳಬಾರದು. ಅವರ ನೆನಪುಗಳಲ್ಲಿ ಜೀವಂತವಾಗಿರುತ್ತಾರೆ. ರಾಕೇಶ್ ಇಡೀ ನಾಡನ್ನು ಸತತವಾಗಿ ನಗಿಸಿದವನು. ಅದು ಈ ವೇದಿಕೆಯ ಕೂಸು. ಪ್ರಕೃತಿಗೆ ನಾವು ಬೆಲೆ ಕೊಡಬೇಕು. ಪ್ರಕೃತಿ ಇವನನ್ನು ಕರೀತೋ ಅಥವಾ ಇವನು ಸ್ವಲ್ಪ ತಡೀ ಎಂದು ಹೇಳಬಹುದಿತ್ತೋ ಗೊತ್ತಿಲ್ಲ. ಬದುಕನ್ನೂ ರಾಕೇಶ್ ಕಾಮಿಡಿ ತರ ತೆಗೆದುಕೊಂಡುಬಿಟ್ಟನೋ ಗೊತ್ತಿಲ್ಲ. ಹೋಗಿ ಬಾ, ಮತ್ತೆ ಬಾ ಇಷ್ಟೇ ಹೇಳಲು ಸಾಧ್ಯ. ಅವನು ನಮ್ಮ ನಾಡಿನ ಅತ್ಯಂತ ಮುದ್ದಿನ ನಟ. ಅವನ ನೆನೆಪುಗಳಲ್ಲಾದರೂ ಅವನನ್ನ ಸದಾಕಾಲ ಬದುಕಿಸಿಕೊಳ್ಳೋಣ ಎಂದಿದ್ದಾರೆ ಯೋಗರಾಜ್ ಭಟ್ಟರು.
Comments are closed.