ಸಿಬ್ಬಂದಿಗಳಿಗೆ ಕನ್ನಡ ಕಲಿಸಲು ಮುಂದಾದ SBI

Share the Article

Bengaluru: ರಾಜ್ಯದಲ್ಲಿ ಎಸ್‌ಬಿಐ ಅಧಿಕಾರಿಯೊಬ್ಬರು ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ಘಟನೆಯ ಬಳಿಕ ಎಸ್‌ಬಿಐ ತನ್ನ ಸಿಬ್ಬಂದಿಗೆ ಕನ್ನಡ ಕಲಿಕೆಯನ್ನು ಪ್ರಾರಂಭಿಸಿದೆ. ಕರ್ನಾಟಕದಲ್ಲಿ ಸ್ಥಳೀಯ ಭಾಷೆಯಾದ ಕನ್ನಡದ ಮಹತ್ವವನ್ನು ಒತ್ತಿಹೇಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್‌ನ ಅಧಿಕೃತ ಪತ್ರವೊಂದರಲ್ಲಿ ತಿಳಿಸಲಾಗಿದೆ.

ಎಸ್‌ಬಿಐ ತನ್ನ ಸುತ್ತೋಲೆಯಲ್ಲಿ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಸಂವಹನ ಮಾಡದ ಸಿಬ್ಬಂದಿ ಮತ್ತು ಅಧಿಕಾರಿಗಳಿಗಾಗಿ ಕನ್ನಡ ಕಲಿಕಾ ತರಗತಿಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ಈ ತರಗತಿಗಳು ಮೇ 28ರಂದು ಆರಂಭವಾಗಲಿದ್ದು, ಡಿಜಿಎಂ, ಎಜಿಎಂ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಕನ್ನಡದಲ್ಲಿ ಮಾತನಾಡುವ ಕೌಶಲ್ಯವನ್ನು ಕಲಿಸುವ ವಿಶೇಷ ತರಬೇತಿಯನ್ನು ಒಳಗೊಂಡಿರುತ್ತವೆ. ಈ ಕಾರ್ಯಕ್ರಮವು ಪ್ರತಿ ಬುಧವಾರ ನಡೆಯಲಿದ್ದು, ತರಬೇತಿಯು ಎಲ್ಲಾ ಸಿಬ್ಬಂದಿಗೆ ಕಡ್ಡಾಯಗೊಳಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಬ್ಯಾಂಕಿನ ಈ ಕ್ರಮವನ್ನು ಕೆಲವು ಕನ್ನಡಿಗರು ಸ್ವಾಗತಿಸಿದ್ದಾರೆ. “ಎಸ್‌ಬಿಐನ ಈ ಪ್ರಯತ್ನವು ಪ್ರಶಂಸನೀಯ. ಕನ್ನಡಿಗರಾದ ನಾವು ಇದನ್ನು ಗೌರವಿಸುತ್ತೇವೆ” ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ, ಇನ್ನೊಬ್ಬರು “ಇದೆಲ್ಲ ಪಕ್ಕಾ ಡ್ರಾಮಾ, ನಮಗೆ ಕನ್ನಡಿಗರನ್ನೇ ನೇಮಿಸಿ” ಎಂದು ಮತ್ತೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Comments are closed.