Harish Poonja: ಶಾಸಕ ಹರೀಶ್ ಪೂಂಜಾ ಕೋಮು ದ್ವೇಷ ಭಾಷಣ ಮಾಡಿದ ಪ್ರಕರಣ -ಹೈ ಕೋರ್ಟ್ ತಾತ್ಕಾಲಿಕ ತಡೆ

Harish Poonja : ತೆಕ್ಕಾರು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಕೋಮು ದ್ವೇಷದ ಭಾಷಣ ಮಾಡಿದಕ್ಕಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ದೂರನ್ನು ರದ್ದುಗೊಳಿಸಬೇಕೆಂದು ಹರೀಶ್ ಪೂಂಜ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಅರ್ಜಿ ವಿಚಾರಣೆಗೆ ಬಂದಿದ್ದು, ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿ ವಿಚಾರಣೆಯನ್ನ ಮುಂದೂಡಿ ಆದೇಶಿಸಿದೆ.
ಹೌದು, ವಾದ-ಪ್ರತಿವಾದ ಆಲಿಸಿದ ಕೋರ್ಟ್, ಹರೀಶ್ ಪೂಂಜಾ ವಿರುದ್ಧ ಕೋಮು ದ್ವೇಷ ಆರೋಪಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿ, ಜೂ.18ಕ್ಕೆ ವಿಚಾರಣೆ ಮುಂದೂಡಿತು.
ಪೂಂಜಾ ಪರ ವಕೀಲರು ವಾದಿಸಿ, ಇಡೀ ದೂರನ್ನು ಓದಿದರೆ ಅನ್ವಯಿಸಿರುವ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ. ಧರ್ಮ ಧರ್ಮಗಳ ನಡುವೆ ದ್ವೇಷ ಹರಡುವಂಥ ಕೆಲಸವನ್ನು ಪೂಂಜಾ ಅವರು ಮಾಡಿಲ್ಲ. ಸರ್ಕಾರದ ಪರ ವಕೀಲರು ಆರೋಪ ಪಟ್ಟಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅದಾಗ್ಯೂ, ಆರೋಪ ಪಟ್ಟಿ ವಜಾ ಮಾಡಬಹುದಾಗಿದೆ.
ಅಲ್ಲದೆ ದೂರುದಾರ ಇಬ್ರಾಹಿಂ ಪರ ವಕೀಲ ಎಸ್ ಬಾಲನ್ ಅವರು ಪ್ರತಿವಾದಿಸಿ, “144 ಸೆಕ್ಷನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಕೋಮುಗಲಭೆ ಹುಟ್ಟುಹಾಕಬೇಕು ಎಂಬ ಕಾರಣಕ್ಕಾಗಿಯೇ ಶಾಸಕ ಹರೀಶ್ ಪೂಂಜಾ ತೆಕ್ಕಾರಿನಲ್ಲಿ ಕೋಮುದ್ವೇಷದ ಭಾಷಣ ಮಾಡಿದ್ದಾರೆ. “ಹರೀಶ್ ಪೂಂಜಾ ಒರ್ವ ಹ್ಯಾಬಿಚ್ಯುವಲ್ ಅಫೆಂಡರ್. ಆತ ಒರ್ವ ಪುನರಾವರ್ತಿತ ಆರೋಪಿ. ಶಾಸಕಾಂಗಕ್ಕೆ ಅನರ್ಹವಾಗಿರುವ ವ್ಯಕ್ತಿಯಾಗಿದ್ದಾರೆ. ಹರೀಶ್ ಪೂಂಜಾ ವಿರುದ್ದ ಇದಲ್ಲದೇ ಏಳು ಎಫ್‌ಐಆರ್ ದಾಖಲಾಗಿದೆ. ಏಳೂ ಎಫ್‌ಐಆರ್ ಗಳೂ ಪುನರಾವರ್ತಿತ ಆಪರಾಧವೇ ಆಗಿದೆ. ಎಲ್ಲಾ ಎಫ್‌ಐಆರ್ ಗಳಲ್ಲೂ ಜಾಮೀನು ತೆಗೆದುಕೊಂಡಿದ್ದಾರೆ. ಅಪರಾಧವನ್ನು ಪುನರಾವರ್ತಿಸಬಾರದು ಎಂಬ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಓರ್ವ ಶಾಸಕನಾಗಿ ಕಾರ್ಯಾಂಗ, ನ್ಯಾಯಾಂಗಕ್ಕೆ ಪೂರಕವಾಗಿ ಬದುಕಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಹರೀಶ್ ಪೂಂಜಾ ಶಿಕ್ಷೆಗೆ ಅರ್ಹವಾದ ವ್ಯಕ್ತಿಯಾಗಿದ್ದಾರೆ. ನೂರು ಕೇಸ್ ಹಾಕಿದರೂ ಹೈಕೋರ್ಟ್ ಅನ್ನೂ ನಾನು ಕೇರ್ ಮಾಡಲ್ಲ ಎಂದು ನ್ಯಾಯಾಂಗವನ್ನೇ ದುರಹಂಕಾರದಿಂದ ಉಲ್ಲೇಖಿಸುತ್ತಾರೆ. ಹಾಗಾಗಿ ಹರೀಶ್ ಪೂಂಜಾಗೆ ನಾಗರಿಕರಿಗೆ ನೀಡುವ ಯಾವ ಕರುಣೆಯನ್ನೂ ನ್ಯಾಯಾಂಗ ನೀಡುವ ಅಗತ್ಯ ಇಲ್ಲ” ಎಂದು ಬಾಲನ್ ವಾದ ಮಂದಿಸಿದರು.
ಅಲ್ಲದೆ ಹರೀಶ್ ಪೂಂಜಾ ಭಾಷಣ ಮಾಡಿದ ತೆಕ್ಕಾರು ದೇವಸ್ಥಾನದ ವೇದಿಕೆಯೇ ಮುಸ್ಲಿಮರ ಜಮೀನಲ್ಲಿ ನಿರ್ಮಾಣವಾಗಿತ್ತು. ತೆಕ್ಕಾರಿನಲ್ಲಿ ಹಿಂದೂ ಮುಸ್ಲೀಮರು ಬಹಳ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾತ್ರೆಗಳನ್ನು ತಮ್ಮದೇ ಮನೆಯ ಹಬ್ಬವೆಂಬಂತೆ ಸಂಭ್ರಮಿಸಿದ್ದಾರೆ. ಇಂತಹ ಸೌಹಾರ್ದತೆಯನ್ನು ರಕ್ಷಿಸುವ ಸಾಂವಿಧಾನಿಕ ಕರ್ತವ್ಯ ಹೊಂದಿರುವ ಶಾಸಕನೊಬ್ಬ ಅದನ್ನು ಹಾಳುಗೆಡವಲು ಯತ್ನಿಸುತ್ತಾನೆ ಎನ್ನುವುದು ದುರಂತ. ಹಾಗಾಗಿ ಎಫ್‌ಐಆರ್ ಅಥವಾ ಚಾರ್ಜ್ ಶೀಟ್ ರದ್ದತಿಯ ಅರ್ಜಿಯ ವಿಚಾರಣೆಯನ್ನೇ ನಡೆಸದೇ ವಜಾಗೊಳಿಸಬೇಕು ಎಂದು ಬಾಲನ್ ವಾದಿಸಿದರು.
Comments are closed.