Trapped in Locked Car: ಆಟವಾಡಲು ಹೋಗಿ ಕಾರ್‌ನಲ್ಲಿಯೇ ಲಾಕ್ ಆದ ಮಕ್ಕಳು; ಉಸಿರುಗಟ್ಟಿ ನಾಲ್ಕು ಮಕ್ಕಳು ಸಾವು

Trapped in Locked Car: ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಭಾನುವಾರ ಕಾರಿನೊಳಗೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ದುರಂತ ಸಂಭವಿಸಿದೆ. ವಿಜಯನಗರಂ ಕಂಟೋನ್ಮೆಂಟ್ ವ್ಯಾಪ್ತಿಯ ದ್ವಾರಪುಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಪೊಲೀಸರ ಪ್ರಕಾರ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ವರು ಮಕ್ಕಳು ಆಟವಾಡುತ್ತಿದ್ದಾಗ ನಿಲ್ಲಿಸಿದ್ದ ಕಾರಿನೊಳಗೆ ಹೋಗಿದ್ದು, ಕೂಡಲೇ ಕಾರಿನ ಬಾಗಿಲುಗಳು ಲಾಕ್ ಆಗಿದ್ದು, ಮಕ್ಕಳು ಅಲ್ಲೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.
ಬೆಳಿಗ್ಗೆಯಿಂದ ಮಕ್ಕಳು ಕಾಣದ ಕಾರಣ ಪೋಷಕರು ಹುಡುಕಾಟ ನಡೆಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕೊನೆಗೆ, ಸ್ಥಳೀಯ ಮಹಿಳಾ ಮಂಡಳಿ ಕಚೇರಿಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಮಕ್ಕಳ ಶವಗಳು ಪತ್ತೆಯಾಗಿವೆ.
ಭಾನುವಾರ ಬೆಳಿಗ್ಗೆ 8 ವರ್ಷದ ಉದಯ್, 8 ವರ್ಷದ ಚಾರುಮತಿ, 6 ವರ್ಷದ ಚರಿಷ್ಮಾ ಮತ್ತು 6 ವರ್ಷದ ಮನಸ್ವಿ ಆಟವಾಡಲು ಹೊರಗೆ ಹೋಗಿದ್ದರು. ಚಾರುಮತಿ ಮತ್ತು ಚರಿಷ್ಮಾ ಸಹೋದರಿಯರು, ಉಳಿದ ಇಬ್ಬರು ಅವರ ಸ್ನೇಹಿತರಾಗಿದ್ದರು. ಅವರು ಬಹಳ ಸಮಯವಾದರೂ ಮನೆಗೆ ಹಿಂತಿರುಗದಿದ್ದಾಗ, ಅವರ ಪೋಷಕರು ಅವರನ್ನು ಹುಡುಕಲು ಪ್ರಾರಂಭಿಸಿದರು. ಮಕ್ಕಳು ಆಟವಾಡಲೆಂದು ಹೊರಗೆ ಬಂದಾಗ, ಕಾರೊಂದರ ಬಾಗಿಲು ಓಪನ್ ಮಾಡಲು ಹೋದಾಗ ಅದು ಓಪನ್ ಆಗಿದೆ. ಮಕ್ಕಳು ಕೂಡಲೇ ಕಾರಿನೊಳಗೆ ಕೂತು ಆಟ ಆಡಲು ಕುಳಿತಿದ್ದಾರೆ. ಆದರೆ ನಂತರ ಬಾಗಿಲುಗಳು ಆಕಸ್ಮಿಕವಾಗಿ ಲಾಕ್ ಆಗಿ, ಅವರು ಒಳಗೆ ಸಿಲುಕಿಕೊಂಡು, ನಾಲ್ವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಕಳೆದ ತಿಂಗಳಲ್ಲಿ ನಡೆದ ಎರಡನೇ ಘಟನೆ ಇದು. ಏಪ್ರಿಲ್‌ನಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಲಾಕ್ ಮಾಡಲಾದ ಕಾರಿನಲ್ಲಿ ಸಿಲುಕಿಕೊಂಡು ಇಬ್ಬರು ಹುಡುಗಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಚೆವೆಲ್ಲಾ ಮಂಡಲದ ಡಮರಗಿಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಬಂಧಿಕರ ಮದುವೆಗೆ ಬಂದಿದ್ದ ನಾಲ್ಕು ಮತ್ತು ಐದು ವರ್ಷದ ಇಬ್ಬರು ಸೋದರಸಂಬಂಧಿಗಳು ಮನೆಯ ಹೊರಗೆ ಆಟವಾಡುತ್ತಿದ್ದಾಗ ನಿಲ್ಲಿಸಿದ್ದ ಕಾರಿಗೆ ನುಗ್ಗಿದರು. ಕಾರಿನ ಬಾಗಿಲುಗಳು ಆಕಸ್ಮಿಕವಾಗಿ ಲಾಕ್ ಆಗಿದ್ದರಿಂದ, ಮಕ್ಕಳು ದೀರ್ಘಕಾಲದವರೆಗೆ ಕಾರಲ್ಲಿ ಸಿಲುಕಿ ಸಾವಿಗೀಡಾಗಿದ್ದರು. ಕುಟುಂಬ ಸದಸ್ಯರು ಅವರನ್ನು ಹುಡುಕಲು ಪ್ರಾರಂಭಿಸಿದಾಗ, ಅಂತಿಮವಾಗಿ ಅವರು ವಾಹನದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಏತನ್ಮಧ್ಯೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾನುವಾರ ನಡೆದ ಮತ್ತೊಂದು ದುರಂತದಲ್ಲಿ, ಮಳೆನೀರು ತುಂಬಿದ ಗುಂಡಿಯಲ್ಲಿ ಮೂವರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ಕುಪ್ಪಂ ಮಂಡಲದ ದೇವರಾಜಪುರಂನಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ಶಾಲಿನಿ (5), ಅಶ್ವಿನ್ (6) ಮತ್ತು ಗೌತಮಿ (8) ಎಂದು ಗುರುತಿಸಲಾಗಿದೆ.
Comments are closed.