Bantwala: ವ್ಯಕ್ತಿಯ ಕೊಲೆ ಯತ್ನ ಪ್ರಕರಣ; ಪೊಲೀಸರಿಂದ ತೀವ್ರಗೊಂಡ ತನಿಖೆ, ನಾಲ್ಕು ವಿಶೇಷ ತಂಡ ರಚನೆ

Bantwala: ಪಾಣೆಮಂಗಳೂರಿನ ಅಕ್ಕರಂಗಡಿಯಲ್ಲಿ ನಡೆದ ಸ್ಥಳೀಯ ನಿವಾಸಿ ಅಬ್ದುಲ್ ಹಮೀದ್ ಕೊಲೆ ಯತ್ನ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರಿಂದ ತನಿಖೆ ತೀವ್ರಗೊಂಡಿದೆ. ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವ ಕುರಿತು ವರದಿಯಾಗಿದೆ.

ಅಕ್ಕರಂಗಡಿ ಬಸ್ ನಿಲ್ದಾಣದ ಬಳಿ ಇರುವ ಕ್ಯಾಂಟೀನ್ ಸಮೀಪದಲ್ಲಿ ನಿಂತು ಫೋನಿನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಮುಸುಕುಧಾರಿಗಳ ತಂಡ ತಲವಾರಿನಿಂದ ದಾಳಿ ಮಾಡಿ ಪರಾರಿಯಾಗಿದೆ. ದುಷ್ಕರ್ಮಿಗಳು ಹಮೀದ್ ಅವರ ಕುತ್ತಿಗೆಯನ್ನು ಗುರಿ ಮಾಡಿದ್ದರು ಎನ್ನಲಾಗಿದೆ. ಆದರೆ ಆಯುಧ ಬೀಸುವ ಸಂದರ್ಭದಲ್ಲಿ ಕೈ ಅಡ್ಡ ಹಿಡಿದ ಪರಿಣಾಮ ಕೈಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.
ಬಂಟ್ವಾಳ ನಗರ ಠಾಣೆಯಲ್ಲಿ ಘಟನೆಯ ಕುರಿತು ಕ್ಯಾಂಟೀನ್ ಕಾರ್ಮಿಕ ಯಾಸೀರ್ ಅರಾಫತ್ ನೀಡಿರುವ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.
ಹಮೀದ್ ಜೊತೆ ಸಂಪರ್ಕದಲ್ಲಿದ್ದವರನ್ನು ಪೊಲೀಸರು ವಿಚಾರಿಸುತ್ತಿದ್ದು, ದುಷ್ಕರ್ಮಿಗಳು ಎತ್ತ ಸಾಗಿದ್ದಾರ ಎನ್ನುವ ನಿಟ್ಟಿನಲ್ಲಿ ತನಿಖೆ ನಡೆದಿದೆ. ವೈಯಕ್ತಿಕ ವಿಚಾರಕ್ಕೆ ಗುಂಪುಗಳ ನಡುವೆ ವೈಷಮ್ಯ ಮುಂದುವರಿದ ಭಾಗವಾಗಿ ದಾಳಿ ನಡೆದಿರುವ ಕುರಿತು ಪೊಲೀಸರಿಗೆ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ.
ಹಮೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರೂ, ಕೈಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಬೆರಳುಗಳಿಗೆ ಅಪಾಯವಿದೆ ಎನ್ನಲಾಗಿದೆ.
Comments are closed.