Odisha: ಚರಂಡಿಲ್ಲಿ ಸಿಕ್ಕ 3 ತಿಂಗಳ ಹೆಣ್ಣು ಮಗುವನ್ನು ಮಗಳಂತೆ ಸಾಕಿದ ಮಹಿಳೆ – 13ನೇ ವರ್ಷಕ್ಕೆ ಅದೇ ತಾಯಿಯನ್ನು ಕೊಂದ ಬಾಲಕಿ !!

Share the Article

Odisha: ನಾವು ಹೇಳ ಹೊರಟಿರುವ ನೈಜ ಕಥೆಯ ಕುರಿತು ಕೇಳಿದರೆ ನಿಜಕ್ಕೂ ನಿಮ್ಮ ಕಣ್ಣಲ್ಲು ಕೂಡ ನೀರು ಜಿನುಗುತ್ತದೆ. ಸುಮಾರು 13 ವರ್ಷಗಳ ಹಿಂದೆ ಚರಂಡಿಯಲ್ಲಿ ಬಿದ್ದಿದ್ದ ಮೂರು ತಿಂಗಳ ಹೆಣ್ಣು ಹಸುಗೂಸನ್ನು ಮಹಿಳೆ ಒಬ್ಬಳು ಕಂಡು, ಅದನ್ನು ಮನೆಗೆ ತಂದು ತನ್ನ ಮಗುವಿನಂತೆ ಆರೈಕೆ ಮಾಡಿ ಸುಖದಿಂದ ಸಾಕಿದ್ದರು. ಆದರೆ, 13 ವರ್ಷಗಳ ನಂತರ ಅದೇ ಹುಡುಗಿ ತನ್ನ ಇಬ್ಬರು ಬಾಯ್‌ಫ್ರೆಂಡ್‌ಗಳ ಸಹಾಯದಿಂದ ದತ್ತು ತಾಯಿಯನ್ನೇ ಕೊಂದಿರುವ ದಾರುಣ ಘಟನೆ ಒಡಿಶಾದಲ್ಲಿ ನಡೆದಿದೆ.

ಹೌದು, ಸುಮಾರು ಹದಿಮೂರು ವರ್ಷಗಳ ಹಿಂದೆ ತಮಗೆ ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ರಾಜಲಕ್ಷ್ಮಿ ಎಂಬ ಮಹಿಳೆಗೆ ರಸ್ತೆ ಬದಿಯಲ್ಲಿ 3 ದಿನದ ಹೆಣ್ಣುಮಗುವೊಂದು ಸಿಕ್ಕಿತ್ತು. ಕಾನೂನುಪ್ರಕಾರವೇ ಆ ಮಗುವನ್ನು ದತ್ತು ಪಡೆದ ಅವರು ಆ ಅನಾಥ ಮಗುವಿಗೆ ತಾಯಿಯಾದರು. ಅಮ್ಮನಿಗೆ ಬೇಡವಾಗಿ ಬಿದ್ದಿದ್ದ ಆ ಹೆಣ್ಣು ಶಿಶುವಿನ ಜೀವನಕ್ಕೆ ಆಧಾರವಾದರು. ಒಳ್ಳೆಯ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣವನ್ನೂ ಕೊಡಿಸಿದರು.

ಅದಾದ ಒಂದೇ ವರ್ಷಕ್ಕೆ ರಾಜಲಕ್ಷ್ಮಿಯ ಪತಿ ನಿಧನರಾದರು. ಅಂದಿನಿಂದ, ಅವರು ಒಬ್ಬಂಟಿಯಾಗಿ ಹುಡುಗಿಯನ್ನು ಬೆಳೆಸಿದರು. ಹಲವಾರು ವರ್ಷಗಳ ಹಿಂದೆ, ತಮ್ಮ ಮಗಳು ಕೇಂದ್ರೀಯ ವಿದ್ಯಾಲಯದಲ್ಲಿ ಓದಲು ಸಾಧ್ಯವಾಗುವಂತೆ ಅವರು ಪರಲಖೆಮುಂಡಿಗೆ ಸ್ಥಳಾಂತರಗೊಂಡು, ಅವಳನ್ನು ಅಲ್ಲಿಗೆ ಸೇರಿಸಿದರು ಮತ್ತು ಪಟ್ಟಣದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು. 13 ವರ್ಷದ ಆಕೆ ಈಗ 8ನೇ ಕ್ಲಾಸ್ ಓದುತ್ತಿದ್ದಳು. ಮನೆಯಲ್ಲಿ ಎಷ್ಟೇ ಒಳ್ಳೆಯ ಸಂಸ್ಕಾರ ಹೇಳಿಕೊಟ್ಟರೂ ಮನೆಯಿಂದ ಹೊರಗೆ ಹೋದಾಗ ಆಕೆ ಹುಡುಗರೊಂದಿಗೆ ಓಡಾಡುತ್ತಾ, ಮಜಾ ಮಾಡುತ್ತಾ, ಕ್ಲಾಸ್​ಗೆ ಬಂಕ್ ಮಾಡುತ್ತಾ ಸ್ವೇಚ್ಛಾಚ್ಛಾರದ ಜೀವನ ನಡೆಸುತ್ತಿದ್ದಳು. ರಾಜಲಕ್ಷ್ಮಿ ಈ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಹುಡುಗಿ ಮತ್ತು ಆಕೆಯ ದತ್ತು ತಾಯಿಯ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.

ಹೀಗಿರುವಾಗ ರಾಜಲಕ್ಷ್ಮಿ ಅವರು ಈಗಲೇ ಬುದ್ಧಿ ಹೇಳದಿದ್ದರೆ ಮುಂದೆ ಆಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಮಗಳನ್ನು ಕರೆದು ಬುದ್ಧಿ ಹೇಳಿದಳು. ಇನ್ನುಮುಂದೆ ಯಾವ ಹುಡುಗರ ಜೊತೆಯೂ ಸುತ್ತುವಂತಿಲ್ಲ ಎಂದು ಗದರಿದ್ದಳು. ಆದರೆ, ಅದೇ ತನ್ನ ಸಾವಿಗೆ ಕಾರಣವಾಗುತ್ತದೆ ಎಂಬುದು ಆಕೆಗೆ ಗೊತ್ತಿರಲೇ ಇಲ್ಲ!

ಅಮ್ಮ ಬುದ್ಧಿ ಹೇಳಿದಾಗ ಕೋಪಗೊಂಡ 13 ವರ್ಷದ ಬಾಲಕಿ ನನಗೆ ಬುದ್ಧಿ ಹೇಳಲು ನೀನೇನು ನನ್ನ ಹೆತ್ತ ತಾಯಿಯೇ? ಎಂದು ಕೇಳಿ ಗಲಾಟೆ ಮಾಡಿದ್ದಳು. ಹೆತ್ತ ಮಗಳಿಗಿಂತ ಹೆಚ್ಚಾಗಿ ಸಾಕಿದ್ದರೂ ಮಗಳು ಈ ರೀತಿ ವರ್ತಿಸಿದ್ದು ರಾಜಲಕ್ಷ್ಮಿಗೆ ಬೇಸರ ತಂದಿತ್ತು. ತನ್ನ ತಾಯಿ ಈ ರೀತಿ ಹೇಳುತ್ತಿದ್ದಾರೆಂದು ಶಾಲೆಯಲ್ಲಿ ತನ್ನ ಇಬ್ಬರು ಬಾಯ್​ಫ್ರೆಂಡ್​ಗೆ ಹೇಳಿದ ಆ ಬಾಲಕಿ ಅವರ ಜೊತೆ ಸೇರಿ ತಾಯಿಯನ್ನೇ ಕೊಲ್ಲಲು ಪ್ಲಾನ್ ಮಾಡಿದ್ದಳು. ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ತಾಯಿಯನ್ನು ಕೊಲ್ಲಲು ಯೋಚಿಸಿದ ಆಕೆ ಏಪ್ರಿಲ್ 29ರಂದು ತನ್ನ ಇಬ್ಬರು ಗೆಳೆಯರ ಸಹಾಯದಿಂದ ತನ್ನ ಸಾಕು ತಾಯಿಯನ್ನು ಕೊಂದಿದ್ದಾಳೆ. ಅನಾಥವಾಗಿ ಬಿದ್ದಿದ್ದ ಮಗುವಿಗೆ ಆಸರೆ, ಶಿಕ್ಷಣ, ಸಮಾಜದಲ್ಲಿ ಐಡೆಂಟಿಟಿ ನೀಡಿದ ತಪ್ಪಿಗೆ ರಾಜಲಕ್ಷ್ಮಿ ಅದೇ ಮಗುವಿನಿಂದ ಕೊಲೆಯಾಗಿದ್ದಾರೆ.

ಆರೋಪಿಗಳು ರಾಜಲಕ್ಷ್ಮಿಗೆ ನಿದ್ರೆ ಮಾತ್ರೆಗಳನ್ನು ನೀಡಿ, ನಂತರ ದಿಂಬುಗಳಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಮರುದಿನ, ಆಕೆಯ ಮೃತದೇಹವನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಭುವನೇಶ್ವರದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ವೇಳೆ ಸಂಬಂಧಿಕರಿಗೆ ಆಕೆ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ತಿಳಿಸಲಾಗಿತ್ತು.

ಪೊಲೀಸರನ್ನು ಉಲ್ಲೇಖಿಸಿದ ವರದಿಗಳ ಪ್ರಕಾರ, ಕಳೆದ ತಿಂಗಳು ಗಜಪತಿ ಜಿಲ್ಲೆಯ ಪರಲಖೆಮುಂಡಿ ಪಟ್ಟಣದಲ್ಲಿರುವ ಬಾಡಿಗೆ ಮನೆಯಲ್ಲಿ ಆ ಮಹಿಳೆಯನ್ನು ಕೊಲ್ಲಲು ಆ ಹುಡುಗಿ ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಸಂಚು ರೂಪಿಸಿದ್ದಳು ಎಂದು ಹೇಳಲಾಗಿದೆ. ಇಬ್ಬರು ಹುಡುಗರ ಜೊತೆ ಸಂಬಂಧ ಇಟ್ಟುಕೊಂಡಿದ್ದನ್ನು ರಾಜಲಕ್ಷ್ಮಿ ವಿರೋಧಿಸಿದ್ದೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಹಾಗೇ, ಆಕೆ ಸಾಕು ತಾಯಿಯಾಗಿದ್ದರಿಂದ ಆಕೆಯ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಈ ಕೊಲೆ ಮಾಡಿದ್ದಾಳೆಂಬ ಆರೋಪವೂ ಇದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಹುಡುಗಿ ಮಾಡಿದ ಕೊಲೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಅದೊಂದು ಸಹಜ ಸಾವೆಂದೇ ಎಲ್ಲರೂ ಭಾವಿಸುತ್ತಿದ್ದರು. ಆದರೆ, ರಾಜಲಕ್ಷ್ಮಿಯ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಅವರಿಗೆ ಭುವನೇಶ್ವರದಲ್ಲಿ ಬಿಟ್ಟು ಹೋಗಿದ್ದ ಆ ಹುಡುಗಿಯ ಮೊಬೈಲ್ ಫೋನ್ ಸಿಕ್ಕಿತು. ಅದರಲ್ಲಿ ಆಕೆ ಹುಡುಗರ ಜೊತೆ ಮಾಡಿದ್ದ ಮೆಸೇಜ್ ಇತ್ತು. ಅದನ್ನು ನೋಡಿದ ನಂತರ ಅಸಲಿ ವಿಷಯ ಬೆಳಕಿಗೆ ಬಂದಿತು. ವಾಟ್ಸಾಪ್ ಮೆಸೇಜ್​ನಲ್ಲಿ ಆ ಮೂವರೂ ಕೊಲೆಯ ಪ್ಲಾನ್ ಬಗ್ಗೆ ಚಾಟ್ ನಡೆಸಿದ್ದರು. ಆ ಚಾಟ್‌ಗಳಲ್ಲಿ ರಾಜಲಕ್ಷ್ಮಿಯನ್ನು ಕೊಂದು ಅವಳ ಚಿನ್ನಾಭರಣಗಳು ಮತ್ತು ಹಣವನ್ನು ಕಿತ್ತುಕೊಂಡ ಬಗ್ಗೆ ಮಾಹಿತಿ ಇತ್ತು.

ನಂತರ, ಮಿಶ್ರಾ ಮೇ 14ರಂದು ಈ ಸಂಬಂಧ ಪೊಲೀಸ್ ದೂರು ದಾಖಲಿಸಿದರು. ಬಳಿಕ ಮೂವರು ಆರೋಪಿಗಳಾದ 13 ವರ್ಷದ ಹುಡುಗಿ, ದೇವಾಲಯದ ಅರ್ಚಕ ಗಣೇಶ್ ರಾತ್ (21) ಮತ್ತು ಅವನ ಸ್ನೇಹಿತ ದಿನೇಶ್ ಸಾಹು (20) ಅವರನ್ನು ಬಂಧಿಸಲಾಯಿತು.

ಇನ್ನು ಪೊಲೀಸರ ಪ್ರಕಾರ, ಹುಡುಗಿ ರಾಜಲಕ್ಷ್ಮಿಯ ಕೆಲವು ಚಿನ್ನದ ಆಭರಣಗಳನ್ನು ಈ ಹಿಂದೆ ರಾತ್‌ಗೆ ಹಸ್ತಾಂತರಿಸಿದ್ದಳು. ಅವನು ಅವುಗಳನ್ನು ಸುಮಾರು 2.4 ಲಕ್ಷ ರೂ.ಗೆ ಅಡವಿಟ್ಟಿದ್ದಾನೆ ಎನ್ನಲಾಗಿದೆ. ಆರೋಪಿಯಿಂದ ಸುಮಾರು 30 ಗ್ರಾಂ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಜೊತೆಗೆ ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಮೂರು ಮೊಬೈಲ್ ಫೋನ್‌ಗಳು ಮತ್ತು ಎರಡು ದಿಂಬುಗಳನ್ನು ವಶಪಡಿಸಿಕೊಂಡಿದ್ದಾರೆ.

Comments are closed.