Mangalore: ಗಂಡನ ಪಿಂಚಣಿ ಹಣ ಕೇಳಲು ಹೋದ ಮಹಿಳೆ ಬಳಿ ಲಂಚ ಕೇಳಿದ ಅಧಿಕಾರಿಗಳು: ಬಂಟ್ವಾಳದಲ್ಲಿ ಇಬ್ಬರು ಲೋಕಾಯುಕ್ತ ಬಲೆಗೆ

Mangalore: ಗ್ರಾಪಂ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತಿಗೊಂಡು ಮೃತಪಟ್ಟಿದ್ದ ತನ್ನ ಗಂಡನ ಪಿಂಚಣಿ ಹಣವನ್ನು ಕೇಳಲು ಹೋದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಂಟ್ವಾಳ ತಾಲೂಕಿನ ಇಬ್ಬರು ಕಂದಾಯ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ದೂರುದಾರ ಮಹಿಳೆಯ ಗಂಡ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಒಂದರಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದು 2023 ರಲ್ಲಿ ನಿವೃತ್ತಿ ಹೊಂದಿದ್ದರು. ಅನಂತರ 2024 ರಲ್ಲಿ ದಿಢೀರ್ ಮೃತ ಹೊಂದಿದ್ದರು. ಗಂಡನ ಹೆಸರಿಗೆ ಬರುತ್ತಿದ್ದ ಪಿಂಚಣಿ ಮೊತ್ತವನ್ನು ತನ್ನ ಹೆಸರಿಗೆ ಮಾಡಲೆಂದು ಮಹಿಳೆ ಬಂಟ್ವಾಳ ತಾಲೂಕು ಕಂದಾಯ ಇಲಾಖೆ ಮುಖ್ಯ ಲೆಕ್ಕಿಗ ಭಾಸ್ಕರ್ ಎಂಬುವವರ ಬಳಿಗೆ ತೆರಳಿದ್ದಳು. ಎರಡು ಬಾರಿ ಹೋದಾಗಲೂ ಕೆಲಸ ಆಗಿರಲಿಲ್ಲ
ಇತ್ತೀಚೆಗೆ ಮಹಿಳೆಯ ಖಾತೆಗೆ ಪಿಂಚಣಿ ಹಣ ಜಮೆ ಆಗಿದ್ದು, ಪ್ರತಿಯಾಗಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೆ ಗೌಡ ಬಿ.ಎನ್. ಎಂಬುವವರು ತಲಾ 5 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಮಹಿಳೆ ಇದರಿಂದ ನೊಂದಿದ್ದು, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಬಂಟ್ವಾಳ ಖಜಾನೆಯ ಎಪ್.ಡಿ.ಎ ಬಸವೆ ಗೌಡ ಲಂಚದ ಹಣ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಇಬ್ಬರನ್ನೂ ಬಂಧನ ಮಾಡಿದ್ದಾರೆ.
Comments are closed.