Sonu Nigam: ಸೋನು ನಿಗಮ್ ಗೆ ಬಿಗ್ ರಿಲೀಫ್ ನೀಡಿದ ಕರ್ನಾಟಕ ಹೈಕೋರ್ಟ್ !! ಖಡಕ್ ವಾರ್ನಿಂಗ್ ಕೊಟ್ಟು ಕೋರ್ಟ್ ಹೇಳಿದ್ದೇನು?

Share the Article

Sonu Nigam: ಗಾಯಕ ಸೋನು ನಿಗಮ್ ಅವರ ‘ಕನ್ನಡ’ ಹೇಳಿಕೆಯ ಸುತ್ತಲಿನ ಗದ್ದಲದ ನಡುವೆ ಕರ್ನಾಟಕ ಹೈಕೋರ್ಟ್ ಅವರಿಗೆ ಕೊಂಚ ರಿಲೀಫ್‌ ಸಿಕ್ಕಿದೆ.

ಹೌದು, ಪಹಲ್ಗಾಮ್ ದಾಳಿಗೆ ಹೋಲಿಕೆ ಪ್ರಕರಣವನ್ನ ರದ್ದು ಕೋರಿ ಸೋನು ನಿಗಮ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಸೋನು ನಿಗಮ್ ಪರ ವಕೀಲ ಧನಂಜಯ್ ವಿದ್ಯಾಪತಿ ಅವರು ವಾದ ಮಂಡಿಸಿದರೆ ಸರ್ಕಾರದ ಪರ ವಕೀಲ ಬಿ.ಎನ್ ಜಗದೀಶ್ ವಾದಿಸಿದರು.
ಈ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್‌, ಸೋನು ನಿಗಮ್ ಅವರಿಗೆ ಬಿಗ್ ರಿಲೀಫ್ ನೀಡಿದೆ. ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಲಾಗಿದೆ. ಅವರು ತನಿಖೆಗೆ ಸಹಕರಿಸಿದರೆ ಕಲಾವಿದನ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಅಲ್ಲದೇ ವಿಚಾರಣೆಗೆ ಸಹಕರಿಸುವಂತೆ ಸೋನು ನಿಗಮ್‌ಗೂ ಸೂಚನೆ ನೀಡಿದೆ.

ಇನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ದಾಖಲಿಸಲು ಹೈಕೋರ್ಟ್ ಅಸ್ತು ಎಂದಿದೆ. ಅಲ್ಲದೆ ವಿಡಿಯೋ ಕಾನ್ಫರೆನ್ಸ್ ಬಳಿಕ ಆರೋಪಿ ಹೇಳಿಕೆ ದಾಖಲು ಅನಿವಾರ್ಯ ಅನ್ನಿಸಿದ್ರೆ ತನಿಖಾಧಿಕಾರಿಯು ಗಾಯಕ ಸೋನು ನಿಗಮ್ ನಿವಾಸಕ್ಕೆ ತೆರಳಲು ಅವಕಾಶ ಇದೆ. ಅವರ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲು ಮಾಡಲು ಅವಕಾಶ ಇದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಸೋನು ನಿಗಮ್ ನಿವಾಸಕ್ಕೆ ತೆರಳುವ ಸಂಪೂರ್ಣ ಖರ್ಚು, ವೆಚ್ಚ ಭರಿಸಲು ನ್ಯಾಯಾಲಯ ಸೋನು ನಿಗಮ್‌ಗೆ ಸೂಚನೆ ನೀಡಿದೆ.

ಏನಿದು ಪ್ರಕರಣ?
ಬೆಂಗಳೂರಿನ ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಇನ್ಸ್ಟಿಟ್ಯೂಷನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನು ನಿಗಮ ಅವರು ಭಾಗವಹಿಸಿದ್ದರು. ಈ ವೇಳೆ ವೇದಿಕೆ ಏರಿದ ಸೋನು ನಿಗಮ್‌ ಸಾಲು ಸಾಲು ಹಿಂದಿ ಹಾಡನ್ನು ಹಾಡಿದ್ದರು. ಇದರಿಂದ ಬೇಸತ್ತ ಹಲವಾರು ವಿದ್ಯಾರ್ಥಿಗಳು ಕನ್ನಡ ಕನ್ನಡ ಎಂದು ಕಿರುಚಲಾರಂಭಿಸಿದರು. ಈ ಸಮಯದಲ್ಲಿ ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್‌ ʼಪಹಲ್ಗಾಮ್‌ನಲ್ಲಿ ನಡೆದಘಟನೆಯ ಕಾರಣ ಇದೇ. ನಿಮ್ಮ ಮುಂದೆ ಯಾರು ನಿಂತಿದ್ದಾರೆ ಎಂದು ನೋಡಿ. ನಾನು ನಿಮ್ಮನ್ನು ನಿಜಕ್ಕೂ ಇಷ್ಟಪಡುತ್ತೇನೆʼ ಎಂದಿದ್ದರು.

ಈ ಮಾತುಗಳು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಗಾಯಕನ ವಿರುದ್ಧ ಅಸಹಕಾರ ಅಭಿಯಾನವನ್ನು ಘೋಷಿಸಿತು ಮತ್ತು ಅವರು ಕ್ಷಮೆಯಾಚಿಸುವವರೆಗೂ ಇದು ಮುಂದುವರಿಯುತ್ತದೆ ಎಂದು ಹೇಳಿದರು.

ಕನ್ನಡ ಪರ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಧರ್ಮರಾಜ್ ಎ, ಗಾಯಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮತ್ತು ಸಾರ್ವಜನಿಕ ದುಷ್ಕೃತ್ಯಕ್ಕೆ ಪ್ರಚೋದನೆ ನೀಡುವ ಸೆಕ್ಷನ್‌ಗಳ ಅಡಿಯಲ್ಲಿ ಸೋನು ನಿಗಮ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Comments are closed.