Belagavi: ಕರ್ನಲ್‌ ಸೋಫಿಯಾ ಖುರೇಶಿ ಕುಟುಂಬದವರ ಮೇಲೆ ದಾಳಿ ಎಂದು ಫೇಕ್‌ ಫೋಸ್ಟ್‌

Share the Article

Belagavi: ಕರ್ನಲ್‌ ಸೋಫಿಯಾ ಖುರೇಶಿ ಅವರ ಮಾವ ಗೌಸ್‌ ಬಾಗೇವಾಡಿ ನಿವಾಸದ ಮೇಲೆ ದಾಳಿ ನಡೆದಿದೆ ಎನ್ನುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಬೆಳಗಾವಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ.

RSS ನೇತೃತ್ವದಲ್ಲಿ ಸೋಫಿಯಾ ಖುರೇಶಿ ಮತ್ತು ಅವರ ಪುತ್ರ ಸಮೀರ್ ಮೇಲೆ ಕ್ರೂರ ಹಲ್ಲೆ ನಡೆಸಿ, ಮನೆಗೆ ಬೆಂಕಿಯಿಟ್ಟು, ದ್ವೇಷಪೂರಿತ ಘೋಷಣೆಗಳನ್ನು ಕೂಗಲಾಗಿದೆ. ಭಾರತದಲ್ಲಿ ಮುಸ್ಲಿಮರಿಗೆ ಸ್ಥಳವಿಲ್ಲ, ಇದು ಹಿಂದುತ್ವದ ರಾಷ್ಟ್ರ ಎಂದು ಆರ್‌ಎಸ್‌ಎಸ್‌ನ ಹಿಟ್‌ಲಿಸ್ಟ್‌ನಲ್ಲಿ ಸೋಫಿಯಾ ಇದ್ದಾರೆ’ ಎಂಬ ಕಾಲ್ಪನಿಕ ಮತ್ತು ದ್ವೇಷಪೂರಿತ ಪೋಸ್ಟ್ ವೈರಲ್ ಆಗಿತ್ತು. ಈ ಪೋಸ್ಟ್‌ನಲ್ಲಿ ಕುಟುಂಬವನ್ನು ಸ್ಥಳಾಂತರ ಮಾಡಲಾಗಿದೆ ಎಂದೂ ಸುಳ್ಳು ಮಾಹಿತಿ ಅನೀಸ್‌ ಉದ್ದೀನ್‌ ಎಂಬಾತನ ಎಕ್ಸ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿತ್ತು.

ಬೆಳಗಾವಿ ಜಿಲ್ಲಾ ಪೊಲೀಸರು ಈ ಸುಳ್ಳು ಸುದ್ದಿ ಮಾಹಿತಿಯ ಹಿನ್ನೆಲೆಯಲ್ಲಿ ಸೋಫಿಯಾ ಖುರೇಶಿ ಅವರ ಮಾವನ ಮನೆಗೆ ಭದ್ರತೆಯನ್ನು ಒದಗಿಸಿದ್ದಾರೆ. ಗೋಕಾಕ ಸಿಪಿಐ ಸುರೇಶ್‌ ಆರ್‌.ಬಿ. ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಾಗೆನೇ ಸಾರ್ವಜನಿಕರು ಅನಗತ್ಯವಾಗಿ ಕುಟುಂಬವನ್ನು ಭೇಟಿ ಮಾಡಬಾರದೆಂದು ಸೂಚನೆ ನೀಡಿದ್ದಾರೆ.

ದ್ವೇಷಪೂರಿತ ಮತ್ತು ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು ಕಾನೂನು ಬಾಹಿರ. ಇಂತಹ ಕೃತ್ಯದಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಎಚ್ಚರಿಕೆ ನೀಡಿದ್ದಾರೆ.

Comments are closed.