ಜಡ್ಜ್ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ಎಫ್‌ಐಆರ್ ಯಾಕಾಗಿಲ್ಲ: ನ್ಯಾಯಾಂಗದ ಮೇಲೆ ಹರಿಹಾಯ್ದ ಉಪರಾಷ್ಟ್ರಪತಿ

Share the Article

New Delhi: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ನಿವಾಸದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿ 1 ತಿಂಗಳಾದರೂ ಯಾಕೆ ಎಫ್‌ಐಆರ್ ಆಗಿಲ್ಲ ಎಂದು ಸುಪ್ರೀಂಕೋರ್ಟ್ ನೇಮಿಸಿದ ಮೂವರು ನ್ಯಾಯಾಧೀಶರ ಸಮಿತಿಯನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Jagdeep Dhankhar) ಪ್ರಶ್ನಿಸಿದ್ದಾರೆ. ರಾಷ್ಟ್ರಪತಿಗಳ ಅಧಿಕಾರವನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳ ಮೇಲೆ ಉಪರಾಷ್ಟ್ರಪತಿ ಕಳೆದೆರಡು ದಿನಗಳಿಂದ ಉರಿದು ಬೀಳುತ್ತಿದ್ದಾರೆ.

ಕಳೆದ ತಿಂಗಳು ಮಾರ್ಚ್ 14ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಬಂಗಲೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಅವರ ನಿವಾಸದಲ್ಲಿ ಅರೆಮರ್ದ ಸುಟ್ಟ ಕಂತೆ ಕಂತೆ ನೋಟುಗಳು ಪತ್ತೆಯಾಗಿತ್ತು. ಈ ಘಟನೆಯ ಕುರಿತು ಸುಪ್ರೀಂಕೋರ್ಟ್ ಆಂತರಿಕ ತನಿಖೆಗೆ ಆದೇಶಿಸಿ, ನ್ಯಾ. ಯಶವಂತ್ ವರ್ಮಾರನ್ನು ದೆಹಲಿಯಿಂದ ಅಲಹಾಬಾದ್ ಹೈಕೋರ್ಟ್’ಗೆ ವರ್ಗಾಯಿಸಿದ್ದರು.

ಈ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಧನಕರ್, ಈ ಘಟನೆ ಯಾವುದಾದರೂ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ನಡೆದಿದ್ದರೆ ಆಗ ತನಿಖೆಯು ರಾಕೆಟ್ ವೇಗದಲ್ಲಿ ಆಗುತ್ತಿತ್ತು. ಆದರೂ ಇದು ಈಗ ಜಟಕಾ ಎತ್ತಿನಗಾಡಿಯ ರೀತಿಯಲ್ಲೂ ನಡೆಯುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.

ಅಪರಾಧವನ್ನು ವರದಿ ಮಾಡದಿರುವುದು ಅಪರಾಧ ಎಂಬುದು ದೇಶದ ಕಾನೂನು. ಇದು ಕಾನೂನಿಗೆ ಮೀರಿದ ವರ್ಗವೇ? ಅಥವಾ ವಿಚಾರಣೆಯಿಂದ ಯಾವುದಾದರೂ ವಿಶೇಷ ವಿನಾಯಿತಿ ಪಡೆದಿದೆಯೇ ಎಂದು ಅವರು ನ್ಯಾಯಾಲಯದ ಮೇಲೆ ಗುಡುಗಿದರು. ರಾಷ್ಟ್ರಪತಿಗಳಿಗೆ 3 ತಿಂಗಳ ಒಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದ ನಿರ್ಧಾರದ ಬೆನ್ನಲ್ಲಿ, ‘ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ, ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು’ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದರು ಧನಕರ್‌.

ಈ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ (Supreme Court) ಮೂವರು ನ್ಯಾಯಾಧೀಶರನ್ನೊಳಗೊಂಡ ಸಮಿತಿಯನ್ನು ರಚಿಸಿತ್ತು. ಈ ತನಿಖೆಯು ಕಾರ್ಯಾಂಗದ ಕ್ಷೇತ್ರವಾಗಿದೆ, ನ್ಯಾಯಾಂಗದ್ದಲ್ಲ.ಈ ಸಮಿತಿಯನ್ನು ಕಾನೂನು ಮತ್ತು ಸಂವಿಧಾನದ ಯಾವುದೇ ನಿಬಂಧನೆಯ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ ಎಂದು ಅವರು ಹೇಳಿದರು. ನ್ಯಾಯಮೂರ್ತಿಗಳ ವಿಚಾರದಲ್ಲಿ ಅಂತಿಮವಾಗಿ ಕ್ರಮಕೈಗೊಳ್ಳುವ ಅಧಿಕಾರವಿರುವುದು ಸಂಸತ್ತಿಗೆ ಮಾತ್ರ. ಈ ಸಮಿತಿಯ ವರದಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ತಿಳಿಸಿದರು.

Comments are closed.