ಲೇಡಿ ಡಾನ್ ಜಿಕ್ರಾ ತಂಡದಿಂದ 17ರ ಬಾಲಕನ ಹತ್ಯೆ

New delhi: ಇಲ್ಲಿನ ಸೀಲಾಂಪುರ್‌ನಲ್ಲಿ ನಡೆದ 17 ವರ್ಷದ ಬಾಲಕನ ಕೊಲೆಯ ಹಿಂದೆ ಲೇಡಿ ಡಾನ್ (Lady Dan Jikra) ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ. ಗುರುವಾರ ಸಂಜೆ 7:30 ವೇಳೆಗೆ ತನ್ನ ಮನೆಯ ಸಮೀಪದ ಅಂಗಡಿಯಿಂದ ಹಾಲು ಖರೀದಿಸಲು ಹೋಗಿದ್ದ ಕುನಾಲ್ ಕುಮಾರ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಚಾಕು ಹಿಡಿದಿದ್ದ ಐವರು ಪರಾರಿಯಾಗುವ ಮೊದಲು ಕುನಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮೃತ ಕುಮಾರ್ ಕುಟುಂಬ ಮತ್ತು ಸ್ಥಳೀಯರು ಈ ಹತ್ಯೆಯನ್ನು ಜಿಕ್ರಾ (Ziqra) ಮತ್ತು ಆಕೆಯ ಸೋದರ ಸಾಹಿಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪ ಕೇಳಿ ಬರುತ್ತಿದ್ದಂತೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೇವಲ 3 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ಜಿಕ್ರಾ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂದು ಕುನಾಲ್ ಸಹೋದರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾಳೆ. ಕುನಾಲ್ ತಂದೆ ಪ್ರತಿಕ್ರಿಯಿಸಿ, ಜಿಕ್ರಾ ಹಲವು ಬಾರಿ ನನ್ನ ಪುತ್ರನಿಗೆ ಬೆದರಿಕೆ ಹಾಕಿದ್ದಳು. ಅವಕಾಶ ಸಿಕ್ಕರೆ ನನ್ನ ಮಗನನ್ನು ಕೊಲ್ಲುವುದಾಗಿ ಹೇಳಿದ್ದಳು ಎಂದು ತಿಳಿಸಿದರು.
ಯಾರು ಈ ಲೇಡಿ ಡಾನ್?
ಇನ್‌ಸ್ಟಾಗ್ರಾಮ್‌ನಲ್ಲಿ ಲೇಡಿ ಡಾನ್ (Lady Dan) ಎಂದು ಕರೆಸಿಕೊಳ್ಳುವ ಜಿಕ್ರಾ ಗ್ಯಾಂಗ್‌ಸ್ಟಾರ್, ಕುಖ್ಯಾತ ದರೋಡೆಕೋರ ಹಾಶಿಮ್ ಬಾಬಾನ ಪತ್ನಿ. ಕಳೆದ ವರ್ಷ ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಜಿಮ್ ಮಾಲೀಕ ನಾದಿರ್ ಶಾ ಕೊಲೆ ಸೇರಿದಂತೆ ಹಲವಾರು ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಹಶಿಮ್ ಬಾಬಾನ ಪಾತ್ರವಿದ್ದು ಸದ್ಯ ಜೈಲಿನಲ್ಲಿದ್ದಾನೆ. ಈ ಜಿಕ್ರಾ ಸುಮಾರು 10 -15 ಯುವಕರ ಗುಂಪು ಕಟ್ಟಿಕೊಂಡು ಸುತ್ತಾಡುತ್ತ ಇದ್ದು, ಆಕೆ ಜಾಲತಾಣದಲ್ಲಿ ಆಯುಧಗಳನ್ನು ಪ್ರದರ್ಶಿಸುವ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿರುತ್ತಾಳೆ. ಜಿಕ್ರಾ ಕಳೆದ ತಿಂಗಳು ದೇಶೀ ಪಿಸ್ತೂಲ್ ಪ್ರದರ್ಶಿಸುವ ವೀಡಿಯೊ ಪೋಸ್ಟ್ ಮಾಡಿ, ನಂತರ ಶಸ್ತಾಸ್ತ್ರ ಕಾಯ್ದೆಯಡಿಯಲ್ಲಿ ಜೈಲು ಸೇರಿದ್ದಳು.
Comments are closed.