Bidar: ಜನಿವಾರ ಹಾಕಿದ್ದಾನೆಂದು ಬ್ರಾಹ್ಮಣ ವಿದ್ಯಾರ್ಥಿಗೆ CET ಪರೀಕ್ಷೆ ಪ್ರವೇಶ ನಿರಾಕರಣ

Share the Article

Bidar: ಜನಿವಾರ ಹಾಕಿದ್ದನೆಂಬ ಕಾರಣಕ್ಕಾಗಿ ಬ್ರಾಹ್ಮಣ ವಿದ್ಯಾರ್ಥಿ ಒಬ್ಬನಿಗೆ ಸಿಇಟಿ ಪರೀಕ್ಷೆ ಬರೆಯಲು ಬಿಡದೆ ಮನೆಗೆ ವಾಪಸ್ ಕಳಿಸಿದ್ದ ಅಘಾತಕಾರಿ ಪ್ರಕರಣ ಒಂದು ಬೀದರ್ ನಲ್ಲಿ ಬೆಳಕಿಗೆ ಬಂದಿದೆ.

ಹೌದು, ಬಸವನಾಡು, ಶರಣಭೂಮಿ ಬೀದರ್ ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಸಾಯಿಸ್ಫೂರ್ತಿ ಕಾಲೇಜಿನ ಕೇಂದ್ರದಲ್ಲಿ ಗುರುವಾರ ಈ ಘಟನೆ ನಡೆದಿದೆ. ಕೇಂದ್ರದೊಳಗೆ ಪ್ರವೇಶ ನೀಡುವಾಗ ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವಿದ್ಯಾರ್ಥಿ ಸುಚಿವೃತ ಕುಲಕರ್ಣಿ ಎಂಬಾತನಿಗೆ ತಪಾಸಣೆ ಮಾಡುವ ವೇಳೆ ಜನಿವಾರ ಹಾಕಿದ್ದಕ್ಕೆ ತಗಾದೆ ತೆಗೆದ ಅವರು ಈ ದಾರ (ಜನಿವಾರ) ಹಾಕಿ ಪರೀಕ್ಷೆಗೆ ಬಂದರೆ‌ ಹೇಗೆ?‌ ಇದರೊಳಗೆ ಕ್ಯಾಮರಾ ಇದ್ದರೆ ಹೇಗೆ? ಒಳಗಡೆ ಹೋದಾಗ ಇದನ್ನೇ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ? ಎಂಬಿತ್ಯಾದಿ ಅಸಂಬದ್ಧ ವಿಷಯ ಪ್ರಸ್ತಾಪಿಸಿ, ಇದನ್ನು ತೆಗೆದು ಬಾ ಎಂದು ಹಿಯಾಳಿಸಿದ್ದಾರೆ.

ಆಗ ವಿದ್ಯಾರ್ಥಿ ಜನಿವಾರ ತೆಗೆಯುವುದಿಲ್ಲ. ಜನಿವಾರ ತೆಗೆಯಬೇಕೆಂಬ ನಿಯಮವೂ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಆತನೊಂದಿಗೆ ಅಸಭ್ಯ ವರ್ತಿಸಿದ ಸಿಬ್ಬಂದಿ, ಈತನಿಗೆ ಬೈದು ಪರೀಕ್ಷಾ ಕೋಣೆಗೆ ಪ್ರವೇಶ ಕೊಡದೆ ವಾಪಸ್ ಕಳಿಸಿದ್ದಾರೆ.‌ ಸಿಬ್ಬಂದಿ ಈ ವರ್ತನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿ ಸುಚಿವೃತ ಗಣಿತ ಪರೀಕ್ಷೆ ಬರೆಯಲಾಗದೆ ಕಣ್ಣೀರಿಟ್ಟು ವಾಪಸ್ ತೆರಳಿದ್ದಾನೆ. ಘಟನೆ ಬಗ್ಗೆ ಕಿಡಿಕಾರಿದ ಸುಚಿವೃತ ಪಾಲಕರು, ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಹಾಗೂ ಜಿಲ್ಲಾದಿಕಾರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ವಿಚಾರಣೆ ನಡೆಯುತ್ತಿದೆ. ಜಾತಿ ನಿಂದನೆ ಮಾಡಿ, ವಿನಾಕಾರಣ ವಿದ್ಯಾರ್ಥಿಗೆ ಪರೀಕ್ಷೆಯಿಂದ ವಂಚಿತಗೊಳಿಸಿದ ಸಿಬ್ಬಂದಿಯ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Comments are closed.