California:ಭೂಕಂಪದ ಸಂದರ್ಭ ಕೋಟೆ ಕಟ್ಟಿ ಮರಿಗಳ ರಕ್ಷಣೆಗೆ ನಿಂತ ಆನೆಗಳು!

ಕ್ಯಾಲಿಫೋರ್ನಿಯಾ: ಅಮೆರಿಕಾ ಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲಿ ಏಪ್ರಿಲ್ 14 ರಂದು 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಸಮಯದಲ್ಲಿ ಅಲ್ಲಿನ ಸ್ಯಾನ್ ಡಿಯಾಗೋ ಮೃಗಾಲಯದ ಸಫಾರಿ ಪಾರ್ಕ್‌ನಲ್ಲಿ ಆನೆಗಳ ಹಿಂಡಿನ ರಕ್ಷಣಾತ್ಮಕ ಪ್ರತಿಕ್ರಿಯೆ ಜಗತ್ತಿನ. ಮನಸ್ಸು ಗೆದ್ದಿದೆ. ಆನೆಗಳು ತಮ್ಮ ಮಕ್ಕಳ ರಕ್ಷಣೆಗೆ ತೊಡಗಿದ ರೀತಿ ತೀರಾ ಹೃದಯಸ್ಪರ್ಶಿಯಾಗಿದ್ದು, ಈ ಸಂಬಂಧಿ ವಿಡಿಯೋ ಭಾರೀ ವೈರಲ್ ಆಗಿದೆ.
ಅಲ್ಲಿ ಭೂಕಂಪ ನಡೆಯುತ್ತಿದ್ದ ಸಮಯದಲ್ಲಿ ಸಫಾರಿ ಪಾರ್ಕ್‌ನಲ್ಲಿದ್ದ ಆನೆಗಳು ಒಟ್ಟಾಗಿ ಕಿರಿಯ ಆನೆಗಳ ರಕ್ಷಣೆಗೆ ನಿಂತಿರುವುದು ಕಂಡುಬಂದಿದೆ. ನೆಲ ಅಲುಗಾಡುತ್ತಿದ್ದಂತೆ, ಮೂರು ವಯಸ್ಕ ಆನೆಗಳಾದ ಡ್ಲುಲಾ, ಉಮ್ಂಗಾನಿ ಮತ್ತು ಖೋಸಿ ತಮ್ಮ ಮರಿಗಳಾದ ಜುಲಿ ಮತ್ತು ಮಖಯಾ ಸುತ್ತಲೂ ನಿಂತು ರಕ್ಷಣೆಯ ಕೋಟೆ ಕಟ್ಟಲು ನಿಂತಿವೆ. ಭೂಕಂಪದಿಂದ ಆಗಬಹುದಾದ ಯಾವುದೇ ಸಂಭಾವ್ಯ ಅಪಾಯದಿಂದ ತಮ್ಮ ಮರಿಗಳನ್ನು ರಕ್ಷಿಸಲು ಆನೆಗಳು ಮರಿಗಳನ್ನು ಸುತ್ತುವರಿದು ನಿಂತಿವೆ. ಅವು ಭೂಕಂಪ ಆಗುತ್ತಿದ್ದ ಸಮಯದವರೆಗೆ ಕಿವಿಗಳನ್ನು ಬಡಿಯುತ್ತಾ, ಎಚ್ಚರವಾಗಿದ್ದು ಅದೇ ರಕ್ಷಣಾತ್ಮಕ ಭಂಗಿಯಲ್ಲಿ ನಿಂತಿರುವುದು ಗಮನ ಸೆಳೆದಿದೆ.
ಸೂಕ್ಷ್ಮತೆಗೆ ಬುದ್ಧಿವಂತಿಕೆಗೆ ಹೆಸರುವಾಸಿಯಾದ ಆನೆಗಳು ಕಂಪನದಿಂದ ಭೀತಿಗೊಳಗಾದರೂ ತಮ್ಮನ್ನು ತಾವು ರಕ್ಷಿಸುವುದಕ್ಕಿಂತಲೂ ಮೊದಲು ತಮ್ಮ ಮರಿಗಳಿಗೆ ರಕ್ಷಣೆಯ ಮೊದಲ ಆದ್ಯತೆ ನೀಡಿರುವ ಮೂಲಕ ಅವುಗಳ ಮಾತೃ ಹೃದಯವನ್ನು ಜಗತ್ತಿಗೆ ತೋರಿಸಿವೆ.
Comments are closed.