Crime: ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ದರೋಡೆ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ, 15 ಸಾವಿರ ರೂ. ದಂಡ!

Crime: ಮಡಿಕೇರಿಯಲ್ಲಿ ಒಂಟಿ ಮಹಿಳೆ ವಾಸವಾಗಿದ್ದ ಮನೆಗೆ ನುಗ್ಗಿ ಹಲ್ಲೆ ಮಾಡಿ ಚಿನ್ನದ ಕರಿಮಣಿ ಸರ ಮತ್ತು ಉಂಗುರ ದರೋಡೆ ಮಾಡಿದ್ದ ಆರೋಪಿಗೆ ಮಡಿಕೇರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ, 15 ಸಾವಿರ ದಂಡ ಹಾಗೂ ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇಬ್ಬನಿ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ವಿಕಾಸ್ ಜೋರ್ಡಿಯಾ (35) ಎಂಬಾತ ಶಿಕ್ಷೆಗೊಳಗಾದವನಾಗಿದ್ದಾನೆ.
ಆರೋಪಿ ದಿನಾಂಕ 05-11-2023 ರಂದು ಮಡಿಕೇರಿ ನಗರದ IDBI, ಬ್ಯಾಂಕ್ ಎದುರು, ಸಾಕಮ್ಮ ಪ್ರಭಾಕರ್ ಎಂಬುವವರು ಒಂಟಿಯಾಗಿ ವಾಸವಿದ್ದ ಮನೆಗೆ ನುಗ್ಗಿ, ಅವರ ಮೇಲೆ ಹಲ್ಲೆ ಮಾಡಿ ತಲೆಗೆ ಗಾಯಗೊಳಿಸಿ ಕತ್ತಿನಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಮತ್ತು ಕೈ
ಬೆರಳಿನಲ್ಲಿದ್ದ ಉಂಗುರವನ್ನು ಕಸಿದುಕೊಂಡು ಪರಾರಿ ಆಗಿದ್ದ. ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ 397 IPC ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿ ದಿನಾಂಕ 06-11-2023 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಹೆಡ್ ಕಾನ್ಸ್ ಟೇಬಲ್ ಗಳಾದ ಎ.ವಿ. ಕಿರಣ್ ಮತ್ತು ಡಿ. ಹೆಚ್. ಸುಮಿತಾ ಹಾಗೂ ಸಿಬ್ಬಂದಿಗಳು ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡು ದಿನಾಂಕ 02-01-2024 ರಂದು ಮಡಿಕೇರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ದಿನಾಂಕ 09-04-2025 ರಂದು ಆರೋಪಿ ವಿಕಾಸ್ ಜೋರ್ಡಿಯಾನಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪೊಲೀಸ್ ಇಲಾಖೆ ಯ ಪರವಾಗಿ ಸರಕಾರಿ
ಅಭಿಯೋಜಕರಾದ ಎನ್.ಪಿ. ದೇವೇಂದ್ರ ಅವರು ವಾದ ಮಂಡಿಸಿದ್ದರು.
Comments are closed.