Udupi: ವಕೀಲನಿಗೆ ಹನಿಟ್ರ್ಯಾಪ್ ಯತ್ನ: ಹಣ ನೀಡದಿದ್ದರೆ ಅತ್ಯಾಚಾರ ಆರೋಪದ ಬೆದರಿಕೆ!

Share the Article

Udupi: ಯುವ ವಕೀಲನೊಬ್ಬನಿಗೆ ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಯತ್ನಿಸಿದ ಘಟನೆ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಹಿರಿಯ ವಕೀಲರ ಕಚೇರಿಯಲ್ಲಿ ನಡೆದ ಈ ಬೆಳವಣಿಗೆಯು ವಕೀಲ ವೃತ್ತದಲ್ಲಿ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಕುಂದಾಪುರದ ನಿವಾಸಿ ನೀಲ್ ಪಿರೇರಾ, ಕೋಟದ ಹಿರಿಯ ವಕೀಲ ಶ್ಯಾಮಸುಂದರ ನಾಯರಿ ಅವರ ಕಚೇರಿಯಲ್ಲಿ ಸಹಾಯಕ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. 2023ರಲ್ಲಿ ದೇವೇಂದ್ರ ಸುವರ್ಣ ಎಂಬವರು ‘ಮೂಕಾಂಬಿಕಾ’ ಎಂಬ ಹೆಸರಿನ ಮಹಿಳೆಯನ್ನು ಕಚೇರಿಗೆ ಕರೆತಂದು ಒಂದು ಕೇಸಿನ ಕುರಿತು ಚರ್ಚಿಸಿದ್ದರು. ಈ ವೇಳೆ, ಆಕೆ ಪಿರೇರಾ ಅವರ ಮೊಬೈಲ್ ನಂಬರ್ ಪಡೆದುಕೊಂಡಿದ್ದಳು.

ಕೆಲವು ದಿನಗಳ ಬಳಿಕ, ದೇವೇಂದ್ರ ಮತ್ತೆ ಮೂಕಾಂಬಿಕಾಳೊಂದಿಗೆ ಕಚೇರಿಗೆ ಬಂದು ₹50,000 ನೀಡಬೇಕೆಂದು ಒತ್ತಡ ಹಾಕಿದ್ದಾರೆ. ಹಣ ನೀಡದಿದ್ದರೆ, “ನೀವು ಲೈಂಗಿಕ ಕಿರುಕುಳ ನೀಡಿದ್ದೀರಿ , ಅತ್ಯಾಚಾರಕ್ಕೆ ಯತ್ನಿಸಿದ್ದೀರಿ ಎಂಬ ಸುಳ್ಳು ಆರೋಪ ದಾಖಲಿಸುತ್ತೇವೆ” ಎಂದು ಬೆದರಿಕೆಯೊಡ್ಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ನಕಲಿ ದೃಶ್ಯಗಳನ್ನೂ ತಯಾರಿಸುವ ಬೆದರಿಕೆ ನೀಡಿದ್ದಾರೆ.

ಇದೇ ರೀತಿ ಪದೇಪದೇ ಬೆದರಿಕೆ ನೀಡಿ, ಗೂಂಡಾಗಳ ಮೂಲಕ ಜೀವದ ಮೇಲೆ ಭಯ ಹುಟ್ಟಿಸುವ ರೀತಿಯಲ್ಲಿ ಪಿರೇರಾ ಅವರನ್ನು ಶೋಷಿಸಿದ್ದಾರೆ. ಈ ಮೂಲಕ ₹18,000 ವಸೂಲಿ ಮಾಡಿಕೊಂಡಿರುವ ಬಗ್ಗೆ ಪಿರೇರಾ ಅವರು ಹನಿ ಟ್ರ್ಯಾಪ್ ಗೆ ಯತ್ನ ಮತ್ತು ಸುಲಿಗೆ ಪ್ರಕರಣ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Comments are closed.