Mangaluru: ಮಂಗಳೂರು: ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ! ಇಬ್ಬರು ವಿದ್ಯಾರ್ಥಿಗಳು ಸಾವು!

Share the Article

Mangaluru: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಬಳಿ ಎ. 8 ಮಂಗಳವಾರ ಮುಂಜಾನೆ 2.50ರ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಗಾಯಗೊಂಡು, ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿದೆ.

ಕೇರಳದ ಕಾಸರಗೋಡು ಜಿಲ್ಲೆ ಚೆರ್ವತ್ತೂರು ಕೈಯ್ಯೂರು ನಿವಾಸಿ ಧನುರ್ವೇದ್‌ (19) ಮತ್ತು ಕಣ್ಣೂರು ಜಿಲ್ಲೆ ಪಿಣರಾಯಿ ನಿವಾಸಿ ಸಂಕೀರ್ತ್‌ (25) ಮೃತಪಟ್ಟವರು. ಇನ್ನೊಬ್ಬ ವಿದ್ಯಾರ್ಥಿ ತಿರುವನಂತಪುರ ಪತ್ತಮಕ್ಕಲು ನಿವಾಸಿ ಸಿಬಿ ಸ್ಯಾಮ್‌ (25) ಗಾಯಗೊಂಡವರು.

ಮೂವರೂ ನಗರದ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದು, ಸಂಕೀರ್ತ್‌ ಮತ್ತು ಸ್ಯಾಮ್‌ ಡೆಂಟಲ್‌ ಶಿಕ್ಷಣ ಮತ್ತು ಧನುರ್ವೇದ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಶಿಕ್ಷಣ ಪಡೆಯುತ್ತಿದ್ದರು.

ಐದು ಮಂದಿ ಸ್ನೇಹಿತರು ಎರಡು ಬೈಕ್‌ಗಳಲ್ಲಿ ಮುಂಜಾನೆ ವೇಳೆ ಪಂಪ್‌ವೆಲ್‌ನತ್ತ ತೆರಳುತ್ತಿದ್ದಾಗ ದುರ್ಘ‌ಟನೆ ನಡೆದಿದೆ. ಸಂಕೀರ್ತ್‌ ಬೈಕ್‌ ಅನ್ನು ವೇಗವಾಗಿ ನಿರ್ಲಕ್ಷತನದಿಂದ ಹೆದ್ದಾರಿಯಲ್ಲಿ ಚಲಾಯಿಸಿದ್ದು, ಕೆಪಿಟಿ ಬಳಿ ಡಿವೈಡರ್‌ನ ಅಂಚಿಗೆ ಬೈಕ್‌ ಢಿಕ್ಕಿ ಹೊಡೆದಿದೆ. ಪರಿಣಾಮ ನಿಯಂತ್ರಣ ತಪ್ಪಿ ಬೈಕ್‌ ಮುಂದಕ್ಕೆ ಸಾಗಿ ಮೂವರೂ ಡಾಮರು ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಸಂಕೀರ್ತ್‌ ಮತ್ತು ಧನುರ್ವೇದ್‌ಗೆ ಗಂಭೀರ ಗಾಯವಾಗಿದೆ. ಜತೆಗಿದ್ದ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯಯೇ ಅವರು ಮೃತಪಟ್ಟರು. ಈ ಸಂಬಂಧ ಕದ್ರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.