Mangaluru : ಪ್ಲಾಸ್ಟಿಕ್ ನಿಂದ ನಂಬರ್ ಪ್ಲೇಟ್ ಮುಚ್ಚಿ ಸ್ಕೂಟರ್ ಚಾಲನೆ – 5,500 ರೂ ದಂಡ

Mangaluru : ಮಂಗಳೂರಿನಲ್ಲಿ ಸ್ಕೂಟರ್ ಒಂದರ ನಂಬರ್ ಪ್ಲೇಟ್ ಗೆ ಪ್ಲಾಸ್ಟಿಕ್ ಮುಚ್ಚಿಕೊಂಡು ಚಾಲನೆ ಮಾಡುತ್ತಿದ್ದ ಸವಾರನಿಗೆ ನಗರದ ಸಂಚಾರ ಪೊಲೀಸರು ₹ 5,500 ದಂಡ ವಿಧಿಸಿದ್ದಾರೆ.
‘ಸ್ಕೂಟರ್ ಸವಾರನೊಬ್ಬ ಬೆಂದೂರ್‌ವೆಲ್, ಕಂಕನಾಡಿ, ಪಂಪ್‌ವೆಲ್ ಮಾರ್ಗವಾಗಿ ತೊಕ್ಕೊಟ್ಟು ಕಡೆಗೆ ಹೋಗುವಾಗ ವಾಹನದ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್ ನಿಂದ ಮರೆ ಮಾಚಿ, ಹೆಲ್ಮೆಟ್ ಧರಿಸದೆ ಹೋದ ವಿಡಿಯೊವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಶೀಲಿಸಿದ ಪೊಲೀಸರು ಆ ಸವಾರ ಯಾರೆಂದು ಪತ್ತೆ ಹಚ್ಚಿದ್ದಾರೆ.
ಇದೀಗ ಸ್ಕೂಟರ್‌ನ ದಾಖಲಾತಿಗಳನ್ನು ಪರಿಶೀಲನೆ ನಡೆಸಿರುವ ಸಂಚಾರ ಪೊಲೀಸರು, ಸವಾರನ ವಿರುದ್ದ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಂಡಿದ್ದಾರೆ. ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ, ನಂಬರ್ ಪ್ಲೇಟ್ ಮರೆ ಮಾಚಿದ್ದಕ್ಕೆ, ದೋಷಪೂರಿತ ನಂಬರ್ ಪ್ಲೇಟ್ ಬಳಸಿದ್ದಕ್ಕೆ, ನಿರ್ಲಕ್ಷ್ಯದ ಚಾಲನೆಗೆ, ವಾಹನ ಚಲಾವಣೆ ಪರವಾನಗಿ ಇಲ್ಲದೆಯೇ ಸ್ಕೂಟರ್ ಚಲಾಯಿಸಿದ್ದಕ್ಕೆ ಹಾಗೂ ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಿದ್ದಕ್ಕೆ ಸೇರಿ ಒಟ್ಟು ₹ 5,500 ದಂಡ ವಿಧಿಸಿದ್ದಾರೆ.
Comments are closed.