Karnataka: ಡೀಸೆಲ್ ದರ ಏರಿಕೆ ಖಂಡಿಸಿ ಏ. 14 ರಂದು ಲಾರಿ ಮಾಲೀಕರ ಮುಷ್ಕರ!

Karnataka: ಕರ್ನಾಟಕ (Karnataka) ಸರ್ಕಾರ ಎರಡು ರೂಪಾಯಿಯಷ್ಟು ಡೀಸೆಲ್ ಬೇಲೆ ಏರಿಕೆ ಮಾಡಿದೆ. ರಾಜ್ಯ ಸರ್ಕಾರದ ಈ ದರ ಏರಿಕೆಗೆ ಲಾರಿ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ದರ ಏರಿಕೆಯನ್ನು ವಿರೋಧಿಸಿ ಲಾರಿ ಮಾಲೀಕರ ಸಂಘ ಏಪ್ರಿಲ್ 14 ರಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಪ್ರತಿಭಟನೆಯಿಂದ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಸರಬರಾಜು ಕೂಡ ಬಂದ್ ಆಗಲಿದೆ.
ರಾಜ್ಯ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡನೇ ಬಾರಿ ಡೀಸೆಲ್ ದರ ಹೆಚ್ಚಳ ಮಾಡಿದೆ. ಕಳೆದ ವರ್ಷ ಜೂನ್- 15 ಕ್ಕೆ ಮೂರು ರುಪಾಯಿ, ಈ ವರ್ಷ ಏಪ್ರಿಲ್- 1 ರಂದು ಎರಡು ರುಪಾಯಿ ಹೆಚ್ಚಳ ಮಾಡಿದ್ದಾರೆ. ಇದರಿಂದ ಲಾರಿ ಮಾಲೀಕರು ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ 6 ಲಕ್ಷ ಲಾರಿಗಳಿವೆ. ಎಲ್ಲ ಲಾರಿಗಳನ್ನು ಟೋಲ್ ಮತ್ತು ಹೈವೇಗಳಲ್ಲಿ ಬಿಟ್ಟು ಮುಷ್ಕರ ಮಾಡುತ್ತೇವೆ. ನಮ್ಮ ಮುಷ್ಕರದಲ್ಲಿ ಪೆಟ್ರೋಲ್, ಡೀಸೆಲ್ ಬಂಕ್ಗಳು ಬಂಧ್ ಆಗಲಿದೆ. ಡೀಸೆಲ್ ಬೆಲೆ ಇಳಿಕೆ ಮಾಡಲು ಈಗಾಗಲೇ ಗಡುವು ನೀಡಿದ್ವಿ. ಆದರೆ ಸರ್ಕಾರ ಡಿಸೇಲ್ ದರ ಕಡಿಮೆ ಮಾಡಲು ಮುಂದಾಗಿಲ್ಲ. ಹೀಗಾಗಿ ಏಪ್ರಿಲ್ 14 ರಂದು ರಾಜ್ಯಾದ್ಯಂತ ಮುಷ್ಕರ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಏರ್ಪೋರ್ಟ್ ಟ್ಯಾಕ್ಸಿ ಡ್ರೈವರ್ಸ್ ಯುನಿಯನ್ ಸಹ ಬೆಂಬಲ ವ್ಯಕ್ತಪಡಿಸಿದೆ. ಏಪ್ರಿಲ್ 15 ರಂದು ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿದೆ. ಅನಿರ್ದಿಷ್ಟಾವಧಿ ಮುಷ್ಕರ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
Comments are closed.