ಹುರಿದ ಅಡಿಕೆ ಆಮದು ನಿಷೇಧ, ಕೇಂದ್ರ ಕ್ರಮಕ್ಕೆ ಕ್ಯಾಂಪೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ ಶ್ಲಾಘನೆ

Mangalore : ಹುರಿದ ಅಡಿಕೆಯ ನೆಪದಲ್ಲಿ ಆಗುತ್ತಿದ್ದ ಅಡಿಕೆ ಆಮದಿಗೆ ಕಡಿವಾಣ ಬಿದ್ದಿದೆ. ಅಡಿಕೆ ಆಮದು ತಡೆಯ ಡಿಜಿಎಫ್‌ಟಿ (DGFT) ಮೂಲಕ ನಡೆಯುತ್ತಿದ್ದ ಅನಿರ್ಬಂಧಿತ ವಿದೇಶಿ ವ್ಯಾಪಾರ ರದ್ದು ಆಗಿದೆ. ಈ ಮೂಲಕ “ರೋಸ್ಟೆಡ್ ನಟ್ ಸೀಡ್ಸ್” ಅಡಿಯಲ್ಲಿ ಆಮದಾಗುತ್ತಿದ್ದ ಅಡಿಕೆಗೆ ನಿರ್ಬಂಧವಾಗಿದ್ದು, ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಕ್ಯಾಂಪೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ ಶ್ಲಾಘಿಸಿದ್ದಾರೆ.
ಎಪ್ರಿಲ್ 2 ರಂದು ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯು ಅಧಿಸೂಚನೆ ಒಂದನ್ನು ಹೊರಡಿಸಿ, ಈ ಪ್ರಕಾರ “ಹುರಿದ ಅಡಿಕೆಯನ್ನು “ಉಚಿತ” ಆಮದಿನಿಂದ “ನಿಷೇಧಿತ” ಎಂದು ಪರಿಷ್ಕರಿಸಿ ವರ್ಗೀಕರಿಸಲಾಗಿದೆ. ಇದರ ಜೊತೆಗೆ ಕನಿಷ್ಠ ಆಮದು ದರವನ್ನು ಪ್ರತೀ ಕೆಜಿಗೆ ರೂ 351 ನಿಗದಿಪಡಿಸಿದೆ. ಹೀಗಾಗಿ ಈಗ ನಿಗದಿ ಮಾಡಿದ ಎಲ್ಲಾ HSN ಸಂಖ್ಯೆಯಡಿಯಲ್ಲಿ ಬರುವ ವಸ್ತುಗಳ ಸಂಸ್ಕರಿತ ಅಡಿಕೆಯನ್ನು ಕೂಡಾ ಸೇರಿಸಲಾಗಿದ್ದು, ಈಗ ಹುರಿದ ಅಡಿಕೆಯು ಸಹ ಸೇರ್ಪಡೆಗೊಂಡಿದೆ.
ಕೆಲವು ತಿಂಗಳುಗಳ ಹಿಂದೆ ಹುರಿದ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಗೆ ಬಂದಿದ್ದರ ಪರಿಣಾಮ ಭಾರತದ ಕೆಳದರ್ಜೆಯ ಅಡಿಕೆಯ ದರ ಕಡಿಮೆಯಾಗಿರುವುದಲ್ಲದೇ ಬೇಡಿಕೆ ಕುಂಠಿತವಾಗಿದ್ದನ್ನು ಗಮನಿಸಬಹುದಾಗಿದೆ ಎಂದು ಕ್ಯಾಂಪೋ ಪ್ರಕಟಣೆಯಲ್ಲಿ ತಿಳಿಸಿದೆ.
Comments are closed.