Belthangady: ಕಾಡಲ್ಲಿ ಸಿಕ್ಕಿದ್ದ ಹೆಣ್ಣು ಮಗುವಿನ ಕ್ರೂರ ಅಪ್ಪ ಅಮ್ಮ ಕೊನೆಗೂ ಪತ್ತೆ! -ಕರೆನ್ಸಿ ಹಾಕಿ ಬರ್ತೇನೆ ಎಂದು ಅಮ್ಮ ಪರಾರಿ ಆಗಿದ್ದೆಲ್ಲಿಗೆ?!

Belthangady: ನಿಗೂಢತೆ, ಕುತೂಹಲದ ಜೊತೆಗೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೂ ಕಾರಣವಾಗಿದ್ಧ ಬೆಳಾಲಿನ ಕೂಡೋಲುಕೆರೆ ಕಾಡಿನಲ್ಲಿ ಅನಾಥ ಸ್ಥಿತಿಯಲ್ಲಿ ಮೊನ್ನೆ ಮುಂಜಾನೆ ಪತ್ತೆಯಾದ ಹೆಣ್ಣು ಮಗುವಿನ ನಿಜವಾದ ವಾರಿಸುದಾರರು ಯಾರೆಂದು ಇದೀಗ ಕೊನೆಗೂ ಬಹಿರಂಗವಾಗಿದೆ. ಆದರೆ ಈ ಮಗುವಿನ ಕ್ರೂರಿ ಅಪ್ಪ ಮಾತ್ರ ಧರ್ಮಸ್ಥಳ ದೇವಸ್ಥಾನದ ಮುಖ್ಯ ಕೌಂಟರ್ ನ ನೌಕರ ಎನ್ನುವುದೇ ಬಹಳ ಇವತ್ತಿನ ಮುಖ್ಯ ಸಮಾಚಾರ.
ಬೆಳಾಲು ಗ್ರಾಮದ ಕೂಡೋಲುಕೆರೆ ಕಾಡಿನ ಮಧ್ಯೆ ಹಾದು ಹೋಗುವ ರಸ್ತೆಯಲ್ಲಿ ಮೊನ್ನೆ ಬೆಳಾಲು ನಿವಾಸಿ ಗುಲಾಬಿ ಎಂಬವರು ನಡೆದುಕೊಂಡು ಬರುತ್ತಿದ್ದ ವೇಳೆ ಕಾಡಿನೊಳಗಿಂದ ಮಗು ಅಳುತ್ತಿರುವ ಸ್ವರವನ್ನು ಕೇಳಿ ಅವರು ಸ್ವಲ್ಪ ದೂರದಲ್ಲಿ ಕಾಡಿನೊಳಗೆ ಸೊಪ್ಪು ಸಂಗ್ರಹಿಸುತ್ತಿದ್ದ ಹೆಂಗಸರಲ್ಲಿ ಹೇಳಿದರು. ಅದರಂತೆ ಅವರೆಲ್ಲರೂ ಮಗು ಅಳುತ್ತಿರುವ ಸ್ಥಳದತ್ತ ತೆರಳಿದಾಗ ಕೇಸರಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ಮರದ ಬುಡದಲ್ಲಲ್ಲಿ ಮಲಗಿಸಿದ ಹೆಣ್ಣುಮಗು ಪತ್ತೆಯಾಗಿತ್ತು. ಆಗ ಅವರು ಈ ವಿಷಯವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡರ ಗಮನಕ್ಕೆ ತಂದರು. ಇದರಂತೆ ಸ್ಥಳಕ್ಕೆ ಬಂದ ಅಧ್ಯಕ್ಷೆ ಮಗುವಿನ ಬಗ್ಗೆ ಕನಿಕರ ಹಾಗೂ ಬಿಟ್ಟು ಹೋದ ಕ್ರೂರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಗೆ ಆಗ ಗ್ರಾಮಸ್ಥರಾದ ಪ್ರೇಮಾ ಕೊಲ್ಪಾಡಿ, ಪ್ರೇಮಾ ಮಾಯಾ, ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆ ಸಿಎಚ್ ಒ ಸ್ಥಳಕ್ಕೆ ಧಾವಿಸಿ ಉಪಚರಿಸಿ ನಂತರ ಧರ್ಮಸ್ಥಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿನ ಪರೀಕ್ಷೆ ನಡೆಸಿ ಪೊಲೀಸರ ಸಮ್ಮುಖದಲ್ಲಿ ಪುತ್ತೂರು ಶ್ರೀರಾಮಕೃಷ್ಣ ಆಶ್ರಮದ ವಶಕ್ಕೆ ಒಪ್ಪಿಸಲಾಯಿತು.
ಆದರೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ಧಾವಿಸಿ ಮಗುವಿನ ಬಗ್ಗೆ ಕನಿಕರ ವ್ಯಕ್ತಪಡಿ ಮಗುವನ್ನು ಈ ರೀತಿ ಕಾಡಿನಲ್ಲಿ ಎಸೆದು ಹೋಗಿರುವ ಕ್ರೂರಿ ತಂದೆ ತಾಯಿಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಪೊಲೀಸರು ತನಿಖೆಗೆ ಮುಂದಾದರು. ಮೊದಲು ಉಜಿರೆಯಿಂದ ಬೆಳಾಲಿಗೆ ಬರುವ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲು ಮುಂದಾದರು. ಬಳಿಕ ತಾಲೂಕು ವೈದ್ಯಾಧಿಕಾರಿಗಳ ಸೂಚನೆ ಮೇರೆಗೆ ಆಶಾ ಕಾರ್ಯಕರ್ತೆಯರ ಮೂಲಕ ಇಡೀ ಊರಿನ ಪ್ರತಿ ಗರ್ಭಿಣಿಯರು, ಬಾಣಂತಿಯರ ಹಾಗೂ ಇತರ ಕೆಲವೊಂದು ಸಂಶಯಸ್ಪದರ ಮನೆ ಭೇಟಿ ನಡೆಸಿ ಪರಿಶೀಲನೆ ನಡೆಸಿದರು. ಜೊತೆಗೆ ಸ್ಥಳದಲ್ಲಿ ಮಗುವಿಗೆ ಹೊದಿಸಲಾಗಿದ್ದ ಸೀರೆಯ ತುಂಡು, ಬೈರಾಸ್ ಹಾಗೂ ಕೇಸರಿ ಕಾಟನ್ ಪಂಚೆ ಇತ್ಯಾದಿಗಳನ್ನು ಪರಿಶೀಲಿಸತೊಡಗಿದರು. ಈ ವೇಳೆ ತನಿಖಾ ನಿರತ ತಂಡಕ್ಕೆ ಬಹಳ ರೋಚಕ ವಿಚಾರವೊಂದು ತಿಳಿದು ಬಂತು. ಅದೇನೆಂದರೆ ಈ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿರುವುದು ಬೆಳಾಲು ಗ್ರಾಮದ ಬಾಗಿದಡಿ ನಿವಾಸಿ ತಿಮ್ಮಪ್ಪ ಗೌಡರ ಮಗ ಧರ್ಮಸ್ಥಳ ದೇವಸ್ಥಾನದ ಮುಖ್ಯ ಕೌಂಟರ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮುಖ್ಯ ನೌಕರ ರಂಜಿತ್ ಎಂಬಾತನಾಗಿದ್ದಾನೆ. ಮತ್ತು ಈ ಹೆಣ್ಣು ಮಗುವನ್ನು ಹೆತ್ತ ಆ ಕರುಣಾಮಯಿ ಪುಣ್ಯಾತ್ಮೆ ಮಹಾತಾಯಿ ಕೂಡಾ ಹಿಂದೆ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಸಮೀಪದ ಪಾಂಗಾಳ ನಿವಾಸಿ ಧರ್ಮಸ್ಥಳ ದೇವಸ್ಥಾನದಲ್ಲಿ ಮುಖ್ಯ ನೌಕರನಾಗಿರುವ ವ್ಯಕ್ತಿಯೊಬ್ಬರ ಮಗಳೆಂದು ತಿಳಿದುಬಂದಿದೆ.
ಧರ್ಮಸ್ಥಳ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ನೌಕರ ರಂಜಿತ್ ಮತ್ತು ಅದೇ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಧರ್ಮಸ್ಥಳ ಪಾಂಗಾಳದ ಇನ್ನೊಬ್ಬ ನೌಕರನ ಮಗಳನ್ನು ಪ್ರೀತಿಸುತ್ತಿದ್ದನೆನ್ನಲಾಗಿದೆ. ಈ ಯುವತಿಯೂ ಧರ್ಮಸ್ಥಳದ ಲಾಡ್ಜ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಹೀಗಾಗಿ ಈಕೆಯನ್ನು ಮದುವೆಯಾಗುತ್ತೇನೆಂದು ಭರವಸೆ ನೀಡಿದ ರಂಜಿತ್ ಆಕೆ ಕರ್ತವ್ಯ ನಿರ್ವಹಿಸುತ್ತಿದ್ದ ಲಾಡ್ಜ್ ನಲ್ಲೇ ಆಕೆ ಜೊತೆ ದೈಹಿಕ ಸಂಪರ್ಕ ನಡೆಸುತ್ತಿದ್ದ. ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. ಆದರೆ ಈಕೆ ಗರ್ಭಿಣಿಯಾಗಿದ್ದೇನೆ ಎಂದು ತಿಳಿಯುತ್ತಲೇ ಧರ್ಮಸ್ಥಳದ ಕೆಲಸವನ್ನು ಬಿಟ್ಟು ಮಂಗಳೂರಿಗೆ ಹೋಗಿ ಅಲ್ಲಿ ಬಾಡಿಗೆ ಮನೆಯೊಂದರಲ್ಲಿ ಇದ್ದುಕೊಂಡು ರಂಜಿತನ ನೆರವಿನಿಂದಲೇ ಬ್ಯೂಟಿ ಪಾರ್ಲರನ್ನು ನಡೆಸತೊಡಗಿದ್ದಳು. ಅಲ್ಲದೆ ಆಕೆ ಇದೇ ಕಾರಣಕ್ಕಾಗಿ ಕಳೆದ ಒಂದು ವರ್ಷ 2 ತಿಂಗಳಿನಿಂದ ತನ್ನ ಪಾಂಗಾಲದ ಮನೆಗೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಈಕೆಗೆ ಹೆಣ್ಣು ಮಗುವಾದ ಕಾರಣ ಈ ಮಗುವಿನ ಆರೈಕೆ ನಡೆಸಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಉಪಾಯವೊಂದನ್ನು ಹುಡುಕಿದ ಈ ಯುವತಿ ಮೊನ್ನೆ ದಿನ ಮಗುವಿನೊಂದಿಗೆ ಉಜಿರೆಗೆ ಬಂದು ಯಾವುದೋ ವಿಚಾರ ಒಂದರ ಬಗ್ಗೆ ಮಾತನಾಡಲಿಕ್ಕೆ ಇದೆ ಎಂದು ರಂಜಿತ್’ನನ್ನು ಉಜಿರೆಗೆ ಬರಲು ಹೇಳಿದ್ದಳು. ಇದರಂತೆ ಉಜಿರೆಗೆ ಬಂದಿದ್ದ ರಂಜಿತ್ ನಲ್ಲಿ ಈ ಯುವತಿ ‘ತಾನು ಕರೆನ್ಸಿ ಹಾಕಿಸಿಕೊಂಡು ಬರುತ್ತೇನೆ, ಮಗುವನ್ನು ಸ್ವಲ್ಪ ಹಿಡಿದುಕೊಳ್ಳಿ’ ಎಂದು ಹೇಳಿ ಮಗುವನ್ನು ಆತನ ಕೈಯಲ್ಲಿ ಕೊಟ್ಟು ನಾಪತ್ತೆಯಾಗಿದ್ದಳು. ಆದರೆ ಎಷ್ಟು ಹೊತ್ತಾದರೂ ಈಕೆ ಬಾರದಿದ್ದಾಗ ಆತಂಕಗೊಂಡ ರಂಜಿತ್ ಬೇರೆ ಉಪಾಯವಿಲ್ಲದೆ ಮಗುವನ್ನು ಮುಂಜಾನೆ ಬೆಳಾಲು ಕೂಡೋಲುಕೆರೆ ಕಾಡಿನ ಮಧ್ಯೆ ಬಟ್ಟೆ ಸುತ್ತಿ ಮರದ ಬುಡದಲ್ಲಿರಿಸಿ ಈತನು ಕೂಡಾ ಪರಾರಿಯಾಗಿದ್ದ. ಜತೆಗೆ ಆ ಮೂಲಕ ಸಾರ್ವಜನಿಕರಿಗೆ ಮತ್ತು ಪೊಲೀಸರಿಗೆ ಮಗುವಿನ ಬಾರಿಸುದಾರರನ್ನು ಹುಡುಕುವ ಕೆಲಸ ಕೂಡ ದಯಪಾಲಿಸಿ ಹೋಗಿದ್ದ.
ಈಗ ತನಿಖೆಯ ನಂತರ ಕೊನೆಗೂ ಅನಾಥ ಮಗುವಿನ ನಿಜವಾದ ಕ್ರೂರಿ ತಂದೆ ತಾಯಿಗಳು ಯಾರೆಂದು ಬಯಲಾದಂತಾಗಿದೆ. ಹೀಗಾಗಿ ಧರ್ಮಸ್ಥಳದವರೇ ಮುಂದೆ ನಿಂತು ಇಬ್ಬರಿಗೂ ರಿಜಿಸ್ಟರ್ಡ್ ಮದುವೆ ಮಾಡಿಸಲು ಮತ್ತೆ ಅದೇ ಮುಗ್ದ ಮಗುವನ್ನು ಇದೇ ಕ್ರೂರಿ ಪೋಷಕರಿಗೆ ಒಪ್ಪಿಸಿ ಮಗುವಿನ ರಕ್ಷಣೆ ಮಾಡಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.
Comments are closed.