of your HTML document.

Putturu : ನಿವೃತ್ತಿ ಹೊಂದಿದ ಪಿಡಿಒಗೆ 11 ಕಿ ಮೀ ಮೆರವಣಿಗೆ ಮೂಲಕ ಬೀಳ್ಕೊಟ್ಟ ಪುತ್ತೂರಿನ ಜನ !!

Putturu : ಕೆಲವು ಸರ್ಕಾರಿ ಅಧಿಕಾರಿಗಳು ತಮ್ಮ ಪ್ರಾಮಾಣಿಕ ಕೆಲಸ ಕಾರ್ಯಗಳಿಂದ ಜನಮನ್ನಣೆ ಗಳಿಸುತ್ತಾರೆ. ಜನರ ಪ್ರೀತಿಗೆ ಪಾತ್ರರಾಗಿ ಅವರು ನಿವೃತ್ತಿ ಹೊಂದಿದ ಬಳಿಕವು ಜನರು ನೆನೆಯುವಂತೆ ಖ್ಯಾತಿಗಳಿಸಿರುತ್ತಾರೆ. ಇದೀಗ ಪುತ್ತೂರಿನಲ್ಲಿ ಇಂತಹದೇ ಒಬ್ಬ ಅಧಿಕಾರಿ ಇದ್ದಾರೆ. ಅವರು ನಿವೃತ್ತಿ ಹೊಂದಿದ ಕಾರಣ ಪುತ್ತೂರಿನ ಜನರು ಮೆರವಣಿಗೆ ಮೂಲಕ ಅವರಿಗೆ ಬೀಳ್ಕೊಡುಗೆ ನೀಡಿದ್ದಾರೆ.

ಹೌದು, ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಜನರ ಪ್ರೀತಿಗೆ ಪಾತ್ರರಾಗಿದ್ದ ಪೆರುವಾಜೆ ಗ್ರಾಮದ ಪಿಡಿಒ ಜಯಪ್ರಕಾಶ್‌ ಅಲೆಕ್ಕಾಡಿ ಅವರನ್ನು ಗ್ರಾಮಸ್ಥರು ತೆರದ ಜೀಪಿನಲ್ಲಿ 11 ಕಿ.ಮೀ. ದೂರದ ಅವರ ಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ದು ವಿಶಿಷ್ಟ ರೀತಿಯಲ್ಲಿ ಬೀಳ್ಕೊಟ್ಟ ಅಪರೂಪದ ಘಟನೆ ನಡೆದಿದೆ. ಗ್ರಾಮಸ್ಥರು ತೋರಿದ ಅಕ್ಕರೆಯ ಪ್ರೀತಿಗೆ ಅಧಿಕಾರಿಯ ಕಣ್ಣಿಂಚಿನಲ್ಲಿ ಆನಂದ ಬಾಷ್ಪ ಒಸರಿತು.

ಪೆರುವಾಜೆಯಿಂದ 11 ಕಿ.ಮೀ. ದೂರದಲ್ಲಿ ಇರುವ ಅವರ ಮನೆಗೆ ತೆರದ ಜೀಪಿನಲ್ಲಿ ಪಿಡಿಒ ಅವರನ್ನು ಕರೆದುಕೊಂಡು ಹೋಗಲಾಯಿತು. ಅಲಂಕೃತ ತೆರೆದ ಜೀಪಿನಲ್ಲಿ ಪಿಡಿಒ ಸಹಿತವಾಗಿ ಗ್ರಾ.ಪಂ. ಜನಪ್ರತಿನಿಧಿಗಳು ಆಸೀನರಾದರೆ, ಗ್ರಾಮಸ್ಥರು ಹತ್ತಾರು ವಾಹನಗಳಲ್ಲಿ ಅವರನ್ನು ಹಿಂಬಾಲಿಸಿದರು. ಪೆರುವಾಜೆಯಿಂದ ಬೆಳ್ಳಾರೆಯ ಮುಖ್ಯ ರಸ್ತೆಯ ಮೂಲಕ ಸಾಗಿ ನಿಂತಿಕಲ್ಲು ಮಾರ್ಗವಾಗಿ ಮುರುಳ್ಯಕ್ಕೆ ತಲುಪಿ ಅಲ್ಲಿಂದ ಅಲೆಕ್ಕಾಡಿಯ ಅವರ ಮನೆಗೆ ಕರೆದುಕೊಂಡು ವಿಶೇಷ ರೀತಿಯಲ್ಲಿ ಬೀಳ್ಕೊಡಲಾಯಿತು.

ಮೆರವಣಿಗೆಯ ಹಾದಿಯಲ್ಲಿ ಪಿಡಿಒ ಅವರನ್ನು ಜನರು ಹಾರ ಹಾಕಿ ಗೌರವಿಸಿದರೆ, ಮನೆಗೆ ತಲುಪಿದಾಗ ಮನೆ ಮಂದಿ ಆರತಿ ಬೆಳಗಿ ಬರಮಾಡಿಕೊಂಡರು. ಒಟ್ಟಿನಲ್ಲಿ ಗ್ರಾಮಸ್ಥರ ಆಶಯದಂತೆ ಪಿಡಿಒ ಅವರನ್ನು ವಿಶಿಷ್ಟ ರೀತಿಯಲ್ಲಿ ಗೌರವಿಸಲಾಗಿದೆ.

ಲಂಚ ರಹಿತ ಸೇವೆ

ಮುರುಳ್ಯ ಗ್ರಾಮದ ಅಲೆಕ್ಕಾಡಿ ನಿವಾಸಿ ಜಯಪ್ರಕಾಶ್‌ ಅವರು 1998ರಲ್ಲಿ ಎಣ್ಮೂರು ಮಂಡಲ ಪಂಚಾಯತ್‌ನಲ್ಲಿ ಕಚೇರಿ ಗುಮಾಸ್ತರಾಗಿ ಸೇವೆ ಆರಂಭಿಸಿದರು. ಅನಂತರ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಗ್ರೇಡ್‌ 2 ಕಾರ್ಯದರ್ಶಿಯಾಗಿ, ಗ್ರೇಡ್‌ 1 ಕಾರ್ಯದರ್ಶಿಯಾಗಿ ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾ.ಪಂ.ನಲ್ಲಿ, ಪ್ರಭಾರ ಕಾರ್ಯದಶಿಯಾಗಿ ಬೆಳಂದೂರು, ಬಿಳಿನೆಲೆ ಗ್ರಾ.ಪಂ.ನಲ್ಲಿ ಸೇವೆ ಸಲ್ಲಿಸಿ 2018ರಂದು ಪೆರುವಾಜೆ ಗ್ರಾ.ಪಂ. ಪಂಚಾಯತ್‌ನಲ್ಲಿ ಕರ್ತವ್ಯ ಮುಂದುವರಿಸಿ 2025 ಮಾ. 29ರಂದು ನಿವೃತ್ತಿ ಹೊಂದಿದ್ದಾರೆ.

Comments are closed.