ನಕ್ಸಲ್ ನಿಗ್ರಹದಳದ ಪಾಲಿಬೆಟ್ಟ ರಾಜ ದೊರೈಪಾಂಡಿಯನ್ರವರಿಗೆ ಮುಖ್ಯಮಂತ್ರಿ ಪದಕ

ಕರ್ನಾಟಕ ರಾಜ್ಯ ನಕ್ಸಲ್ ನಿಗ್ರಹದಳ ವಿಶೇಷ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲೆ ಪಾಲಿಬೆಟ್ಟದ ರಾಜ ದೊರೈಪಾಂಡಿಯನ್ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿರುವ ರಾಜ ದೊರೈಪಾಂಡಿಯನ್ ಅವರು ಟಾಟಾ ಕಾಫಿ ಸಂಸ್ಥೆಯ ಪಾಲಿಬೆಟ್ಟ ಎಮ್ಮೆಗುಂಡಿ ಕಾಫಿ ತೋಟದ ದೊರೈಪಾಂಡಿಯನ್ ಮತ್ತು ಪಂಚವರ್ಣಂ ದಂಪತಿಯ ಪುತ್ರರಾಗಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಎಮ್ಮೆಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಡಶಾಲಾ ಶಿಕ್ಷಣವನ್ನು ಪಾಲಿಬೆಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿರುವ ರಾಜ ದೊರೈಪಾಂಡಿಯನ್ ಅವರು ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ದಿನಾಂಕ 02/02/2009 ರಂದು ಪೊಲೀಸ್ ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಪದಾರ್ಪಣೆ ಮಾಡಿದ್ದಾರೆ.
ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿ ಪಡೆದು ಮೊದಲಿಗೆ ಕೊಡಗು ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ರಾಜ ದೊರೈಪಾಂಡಿಯನ್ ಅವರು ನಂತರದ ವರ್ಷಗಳಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆ, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಪ್ರಸ್ತುತ ನಕ್ಸಲ್ ನಿಗ್ರಹದಳ ವಿಶೇಷ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಯುತರ ಉದಾತ್ತ ಕರ್ತವ್ಯ ನಿಷ್ಠೆ ಹಾಗೂ ದಕ್ಷ ಸೇವೆಗಾಗಿ ಹಿರಿಯ ಅಧಿಕಾರಿಗಳಿಂದ ಹಲವು ಬಾರಿ ಪ್ರಶಂಸೆಗೊಳಗಾಗಿದ್ದಾರೆ ಅಲ್ಲದೇ 2022ನೇ ಸಾಲಿನಲ್ಲಿ ಸಲ್ಲಿಸಿರುವ ಉತ್ತಮ ಸೇವೆಗಾಗಿ ಮುಖ್ಯಮಂತ್ರಿ ಪದಕವು ರಾಜ ದೊರೈಪಾಂಡಿಯನ್ ರವರನ್ನು ಅರಸಿಕೊಂಡು ಬಂದಿದೆ. ರಾಜ್ಯದ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರು ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ರಾಜ ದೊರೈಪಾಂಡಿಯನ್ ರವರಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಿದ್ದಾರೆ.
Comments are closed.