Bantwala : ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಗ್ರಾ. ಪಂ ಸದಸ್ಯ ಅರೆಸ್ಟ್

Bantwala : ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಬಸ್ಸಿನಿಂದ ಇಳಿದು ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಮತ್ತೆ ಬಸ್ಸಿಗೆ ಹತ್ತಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.
‘ಆರೋಪಿಯನ್ನು ನಾವೂರ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಯಾನೆ ಮೋನು ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ನೀಡಿದ ದೂರಿನಂತೆ ಉದ್ದೇಶ ಪೂರ್ವಕವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಪುತ್ತೂರು ಮೂಲದ ವಿದ್ಯಾರ್ಥಿನಿಯು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ಹಾಸ್ಟೆಲ್‌ನಲ್ಲಿದ್ದು ಕಾಲೇಜಿಗೆ ತೆರಳುತ್ತಿದ್ದಳು. ಆಕೆ ಮಾ. 27ರಂದು ಸಂಜೆ ಮನೆಯಿಂದ ಹೊರಟು ಬಸ್ಸಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಅದೇ ಬಸ್ಸಿನಲ್ಲಿ ಆರೋಪಿಯೂ ಇದ್ದನು ಎನ್ನಲಾಗಿದೆ. ಆರೋಪಿ ಕುಳಿತಿದ್ದ ಸೀಟಿನ ಕಿಟಕಿ ಬದಿಯಲ್ಲಿ ವಿದ್ಯಾರ್ಥಿನಿ ಕುಳಿತಿದ್ದು, ಬಸ್ಸು ಮಾಣಿಗೆ ತಲುಪಿದಾಗ ಆತ ಉದ್ದೇಶಪೂರ್ವಕವಾಗಿ ಕೈಯಿಂದ ಮೈ ಸವರಿದ್ದಾನೆ. ಆಕೆ ಪ್ರತಿರೋಧಿಸಿದರು ಮತ್ತೆ ಅದನ್ನು ಪುನರಾವರ್ತಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಬಸ್ ಕಂಡಕ್ಟರ್ ಗೆ ತಿಳಿಸಿದಾಗ ಅವರು ಕೂಡ ಗದರಿಸಿದ್ದಾರೆ.
ನಿರ್ವಾಹಕರು ಸರಿಯಾಗಿ ಕುಳಿತುಕೊಳ್ಳುವಂತೆ ಗದರಿದ ಬಳಿಕ ಆತ ಸೀಟಿನಿಂದ ಎದ್ದು ಬಸ್ಸಿನ ಬಾಗಿಲಿನ ಬಳಿ ನಿಂತುಕೊಂಡಿದ್ದಾನೆ. ಬಸ್ಸು ಕಲ್ಲಡ್ಕ ತಲುಪುತ್ತಿದ್ದಂತೆ ವಾಹನ ದಟ್ಟಣೆಯಿಂದ ಬಸ್ಸು ವೇಗವನ್ನು ಕಡಿಮೆಗೊಳಿಸಿದಾಗ ಆತ ಬಾಗಿಲು ತೆರೆದು ಓಡಿದ್ದಾನೆ. ಆಗ ಬಸ್ಸನ್ನು ನಿಲ್ಲಿಸಿ ಕಂಡಕ್ಟರ್ ಆರೋಪಿಯನ್ನು ಹಿಡಿಯುವಂತೆ ಬೊಬ್ಬೆ ಹಾಕಿದ್ದು, ಸಾರ್ವಜನಿಕರು ಆತನನ್ನು ಹಿಡಿದು ಮತ್ತೆ ಬಸ್ಸಿನಲ್ಲಿ ಕೂರಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
Comments are closed.