Poster Viral: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಮತ್ತು ಮೀನುಗಾರಿಕಾ ಸಚಿವ ಕಾಣೆಯಾಗಿದ್ದಾರೆ- ಪೋಸ್ಟರ್ ವೈರಲ್?!

Poster Viral: ಸಾಮಾಜಿಕ ಜಾಲತಾಣಗಳಲ್ಲಿ(Social Media) ಸಿದ್ದರಾಮಯ್ಯ ಸರಕಾರದ(CM Siddaramaiah) ಇಬ್ಬರು ಸಚಿವರು ಕಾಣೆಯಾಗಿದ್ದಾರೆ ಎನ್ನುವ ಬಿತ್ತಿ ಪತ್ರಗಳು ವೈರಲಾಗುತ್ತಿದೆ. ಮುಖ್ಯವಾಗಿ ಉಡುಪಿ(Udupi) ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(MLA Lakshmi Hebbalkar) ಅವರು ಪ್ರಾರಂಭದ ದಿನಗಳಿಂದಲೂ ಕೂಡ ಉಡುಪಿಯಲ್ಲಿಯೇ ಮನೆ ಮಾಡುತ್ತೇನೆ ಎನ್ನುವ ಹೇಳಿಕೆಯನ್ನು ನೀಡಿದ್ದರು. ಆದರೆ ಮನೆ ಮಾಡಿದ ಬಳಿಕವೂ ಕೂಡ ಸಚಿವೆ ಉಡುಪಿಯತ್ತ ಮುಖ ಮಾಡಿಲ್ಲ. ಆಗೊಮ್ಮೆ ಈಗೊಮ್ಮೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಮಳೆಯಂತೆ ಸುಳಿದು ಹೋಗುತ್ತಿದ್ದಾರೆ. ಅವರು ಇಲ್ಲಿನ ಜನರ ಸಮಸ್ಯೆಗೆ ಧ್ವನಿಯಾಗುತ್ತಿಲ್ಲ ಎನ್ನುವುದು ಇಲ್ಲಿನ ಜನರ ಬೇಸರಕ್ಕೆ ಕಾರಣವಾಗಿದೆ.
ರಾಜ್ಯದ ಹೆಸರಾಂತ ರಾಜಕಾರಣಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್, ಇತ್ತೀಚಿಗೆ ಸಿಟಿ ರವಿ ಅವರ ಜೊತೆಗಿನ ಜಟಾಪಟಿಯಿಂದಲೇ ರಾಜ್ಯದಲ್ಲಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಸದ್ಯ ಜಿಲ್ಲೆಯಲ್ಲಿ ಬಿರು ಬೇಸಿಗೆಯ ಬವಣೆ ಪ್ರಾರಂಭವಾಗುತ್ತಿದೆ. ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ಒಟ್ಟುಗೂಡಿಸಿ ಬೇಸಿಗೆಯ ಹೀಟ್ ಸ್ಟ್ರೋಕ್ ಮತ್ತು ಮುಂಬರುವ ಮಳೆಗಾಲಕ್ಕಾಗಿ ವಿಪತ್ತು ನಿರ್ವಹಣಾ ಸಭೆಯನ್ನು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೇನು ಉಡುಪಿ ಜಿಲ್ಲೆಯನ್ನು ಬೆಂಬಿಡದೆ ಕಾಡಲಿದೆ. ಇಷ್ಟು ಸಮಸ್ಯೆಗಳು ಇದ್ದರೂ ಕೂಡ ಉಸ್ತುವಾರಿ ಸಚಿವೆ ಉಡುಪಿಯತ್ತ ಮುಖ ಮಾಡಿಲ್ಲ.
ಇನ್ನು ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ(MLA Mankal Vaidya) ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು, ಪಕ್ಕದ ಜಿಲ್ಲೆಯಲ್ಲಿ ಇದ್ದರೂ ಕೂಡ ಉಡುಪಿಗೆ ನೆಂಟರು ಬಂದ ಹಾಗೆ ಬಂದು ಹೋಗುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಜಿಲ್ಲೆಯಲ್ಲಿ ಲೈಟ್ ಫಿಶಿಂಗ್ ಸಮಸ್ಯೆಯಿಂದ ಹಿಡಿದು ಮೀನುಗಾರರ ಸಾಕಷ್ಟು ಸಮಸ್ಯೆಗಳು ಪರಿಹಾರ ಕಾಣದೆ ಬಾಕಿ ಇದ್ದರೂ ಕೂಡ ಇದುವರೆಗೆ ಮೀನುಗಾರಿಕಾ ಸಚಿವರು ಜಿಲ್ಲೆಯತ್ತ ಮುಖ ಮಾಡಿ ನೋಡುವ ಪ್ರಯತ್ನ ಮಾಡಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಇತ್ತೀಚಿಗಷ್ಟೇ ಮಲ್ಪೆ ಬಂದರಿನಲ್ಲಿ ಮಹಿಳೆ ಹಲ್ಲೆ ಪ್ರಕರಣ ನಡೆದಿದ್ದರೂ ಕೂಡ ಮೀನುಗಾರಿಕಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಏನು ಎಂದು ನೋಡಲೇ ನೋಡಲು ಬಾರದೆ ಇರುವುದು ಕೂಡ ಜಿಲ್ಲೆಯ ನಾಗರಿಕರಿಗೆ ಬೇಸರ ತರಿಸಿದೆ.
ಸದ್ಯ ಜಿಲ್ಲೆಯ ಇಬ್ಬರು ಸಚಿವರ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಈ ಪೋಸ್ಟರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜಿಲ್ಲೆಯ ಸಮಸ್ಯೆಗಳನ್ನ ಅವಲೋಕಿಸಿ ಪರಿಹಾರ ನೀಡಬೇಕಾದ ಸಚಿವರು ಜಿಲ್ಲೆಯತ್ತ ಮುಖ ಮಾಡಿ ಮಲಗದೆ ಇದ್ದರೆ ಇಲ್ಲಿನ ಸಮಸ್ಯೆಗಳನ್ನ ಕೇಳುವವರು ಯಾರು ಎನ್ನುವುದು ಸದ್ಯದ ಪ್ರಶ್ನೆ.
Comments are closed.